ADVERTISEMENT

ತಾರಾ ಪ್ರಚಾರಕರಿಗೆ ಕಾರವಾರ ದೂರ!

ಬಿಜೆಪಿ ಪರ ಕೇಂದ್ರ ಸಚಿವರು ಭೇಟಿ; ಸುಳಿಯದ ಕಾಂಗ್ರೆಸ್, ಜೆಡಿಎಸ್‌ನ ಪ್ರಭಾವಿ ಮುಖಂಡರು

ಸದಾಶಿವ ಎಂ.ಎಸ್‌.
Published 4 ಮೇ 2018, 10:20 IST
Last Updated 4 ಮೇ 2018, 10:20 IST

ಕಾರವಾರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ತಾರಾ ಪ್ರಚಾರಕರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ. ಆದರೆ, ಕಾರವಾರದಲ್ಲಿ ಮಾತ್ರ ಅಂತಹ ಕಾರ್ಯಕ್ರಮಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ.

ಬಿಜೆಪಿ: ಕಾರವಾರದಲ್ಲಿ ಏ.30ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ ಪಕ್ಷದ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಮತ ಯಾಚಿಸಿದರು. ಮತ್ತೊಬ್ಬ ಸಚಿವ ವೀರೇಂದ್ರ ಕುಮಾರ್ ಅವರೂ ಈ ಹಿಂದೆ ಒಂದೆರಡು ಸಭೆಗಳಲ್ಲಿ ಪಾಲ್ಗೊಂಡಿದ್ದರು. ಸಚಿವ ಅನಂತಕುಮಾರ ಹೆಗಡೆ ಕ್ಷೇತ್ರದ ವಿವಿಧೆಡೆ ಪ್ರಚಾರದಲ್ಲಿ ತೊಡಗಿದ್ದಾರೆ. ಉಳಿದಂತೆ ದೊಡ್ಡ ನಾಯಕರು ಇತ್ತ ಸುಳಿದಿಲ್ಲ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಿರಸಿ, ಹಳಿಯಾಳ ಭಾಗಕ್ಕೆ ಭೇಟಿ ನೀಡಿದರೂ ಕಾರವಾರದಲ್ಲಿ ಅವರ ಕಾರ್ಯಕ್ರಮ ನಿಗದಿಯಾಗಿಲ್ಲ. ಪಕ್ಷದ ಅಧ್ಯಕ್ಷ ಅಮಿತ್ ಶಾ ಒಂದು ತಿಂಗಳ ಹಿಂದೆ ಹೊನ್ನಾವರಕ್ಕೆ ಭೇಟಿ ನೀಡಿ ಅಲ್ಲಿಂದಲೇ ದೆಹಲಿಗೆ ತೆರಳಿದರು.

ADVERTISEMENT

ಕಾಂಗ್ರೆಸ್: ಈ ವಿಚಾರದಲ್ಲಿ ಕಾಂಗ್ರೆಸ್ ಕೂಡ ಭಿನ್ನವಾಗಿಲ್ಲ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಂಕೋಲಾದಿಂದ ರೋಡ್ ಶೋ ಮಾಡಿ ಭಟ್ಕಳಕ್ಕೆ ಹೋದರೇ ವಿನಾ ಜಿಲ್ಲಾ ಕೇಂದ್ರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿಲ್ಲ. ಅವರ ಜತೆಗೇ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಚಿವರು ಕೂಡ ಅಲ್ಲಿಂದಲೇ ವಾಪಸ್ ಹೋದರು.
‌ ‘ನಗರಕ್ಕೆ ತಾರಾ ಪ್ರಚಾರಕರು ಯಾರು ಬರುತ್ತಾರೆ’ ಎಂದು ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಈಚೆಗೆ ಪತ್ರಕರ್ತರು ಕೇಳಿದಾಗ, ‘ನಾನೇ ಇದ್ದೀನಲ್ಲ. ನಾನೇನು ಸ್ಟಾರ್ ಕ್ಯಾಂಪೇನರ್ ಅಲ್ವಾ’ ಎಂದು ನಗುತ್ತಾ ಮರುಪ್ರಶ್ನಿಸಿದ್ದರು.

ಜೆಡಿಎಸ್: ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಂಕೋಲಾದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಆದರೆ, ಅವರೂ ಜಿಲ್ಲಾ ಕೇಂದ್ರಕ್ಕೆ ಬರುತ್ತಿಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.

ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಒಂದೆರಡು ಸಲ ನಗರಕ್ಕೆ ಭೇಟಿ ನೀಡಿದ್ದರು. ನಟಿ ಪೂಜಾ ಗಾಂಧಿ ಏ.29, 30ರಂದು ನಗರದಲ್ಲಿ ರೋಡ್ ಷೋನಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಈ ಪಕ್ಷದಿಂದಲೂ ತಾರಾ ಪ್ರಚಾರಕರು ಆಗಮಿಸಿಲ್ಲ. ‘ರಾಜಕೀಯ ಪಕ್ಷಗಳ ರೋಡ್ ಷೋ, ಸಾರ್ವಜನಿಕ ಸಮಾರಂಭಗಳು ಅಂಕೋಲಾದಿಂದ ದಕ್ಷಿಣಕ್ಕೆ ಆಯೋಜನೆಯಾಗುತ್ತಿವೆ. ಕಾರ್ಯಕ್ರಮ ದಲ್ಲಿ ಭಾಗವ ಹಿಸಲು ಪಣಜಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖಂಡರು ರಸ್ತೆ ಮಾರ್ಗವಾಗಿ ಬಂದರೆ ಕಾರವಾರದ ಮೂಲಕವೇ ಸಾಗಬೇಕು. ಆದರೂ ಇಲ್ಲಿ ದೊಡ್ಡ ಕಾರ್ಯಕ್ರಮಗಳಾಗುತ್ತಿಲ್ಲ. ಈ ವಿಚಾರದಲ್ಲಿ ನಗರವನ್ನು ಎಲ್ಲ ಪಕ್ಷಗಳೂ ಕಡೆಗ ಣಿಸಿದಂತಿದೆ’ ಎನ್ನುತ್ತಾರೆ ಸ್ಥಳೀಯ ಮಂಜೇಶ್ ರಾಯ್ಕರ್.

ನಾಳೆ ಸ್ಮೃತಿ ಇರಾನಿ

‘ಬಿಜೆಪಿಯ ತಾರಾ ಪ್ರಚಾರಕರು ಕಾರವಾರಕ್ಕೆ ಬರಲಿದ್ದಾರೆ. ಇದೇ 5ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಬೆಳಿಗ್ಗೆ ಕಾರವಾರದಲ್ಲಿ ಮತ್ತು ಸಂಜೆ ಅಂಕೋಲಾದಲ್ಲಿ ರೋಡ್ ಷೋನಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇದೇ 10ರಂದು ಕುಮಟಾಕ್ಕೆ ಕರೆಸಲು ಯತ್ನಿಸಲಾಗುತ್ತಿದೆ’ ಎನ್ನುತ್ತಾರೆ ಪಕ್ಷದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ.

‘ಬರಲೇಬೇಕು ಎಂದೇನಿಲ್ಲ’

‘ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುವ ಕುದುರೆ ಎಂಬುದು ವರಿಷ್ಠರಿಗೆ ತಿಳಿದಿದೆ. ಹಾಗಾಗಿ ಇಲ್ಲಿಗೆ ತಾರಾ ಪ್ರಚಾರಕರು ಭೇಟಿ ನೀಡಲೇಬೇಕು ಎಂದೇನಿಲ್ಲ’ ಎಂಬುದು ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ ಅವರ ಸಮಜಾಯಿಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.