ADVERTISEMENT

ತೀರ ಸೇರುವ ಕಡಲಗರ್ಭದ ಕಸದ ರಾಶಿ

ಅಲಿಗದ್ದಾ ಸಮುದ್ರ ದಡದಲ್ಲಿ ಹೀಗೊಂದು ವಾರ್ಷಿಕ ನೈಸರ್ಗಿಕ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 9:57 IST
Last Updated 16 ಜುಲೈ 2013, 9:57 IST

ಕಾರವಾರ: ಸಮುದ್ರದ ಒಡಲು ಸೇರಿದ್ದ ಕಸಕಡ್ಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಸಮುದ್ರ ಉಬ್ಬರದಿಂದಾಗಿ ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ಹೇರಳ ಪ್ರಮಾಣದಲ್ಲಿ ಬಿದ್ದಿವೆ.

ಕಸವು ದಪ್ಪ ದಪ್ಪ ಪದರುಗಳಾಗಿ ಬಿದ್ದಿದ್ದು, ಇದರಲ್ಲಿ ಕೊಳೆತ ಗಿಡ, ಮರಗಳ ಎಲೆಗಳು ಹಾಗೂ ನಾನಾ ರೀತಿಯ ಪ್ಲಾಸ್ಟಿಕ್ ವಸ್ತುಗಳು ಸೇರಿವೆ.
ಈಚೆಗೆ ಬಿದ್ದ ಭಾರಿ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ಈ ತ್ಯಾಜ್ಯಗಳು ನದಿ ನೀರಿನೊಂದಿಗೆ ಸಮುದ್ರ ಸೇರಿತ್ತು. ಈಗ ಸಮುದ್ರ ಉಬ್ಬರ ಸಮಯದಲ್ಲಿ ಸಾಗರ ಗರ್ಭ ಸೇರಿದ್ದ ಈ ಎಲ್ಲ ಕಸ-ಕಡ್ಡಿಗಳು ಅಲಿಗದ್ದಾ ಕಡಲತೀರದಲ್ಲಿ ರಾಶಿ ರಾಶಿಯಾಗಿ ಬಿದ್ದಿವೆ. 

ನೈಸರ್ಗಿಕ ಪ್ರಕ್ರಿಯೆ: ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಳೆಗಾಲದಲ್ಲಿ ಮಾತ್ರ ಇದು ಸಂಭವಿಸುತ್ತದೆ. ನಾಲ್ಕೈದು ದಿನಗಳು ನಿರಂತರ ಮಳೆಯಾದಾಗ ನದಿಗಳು ಉಕ್ಕಿ ಪ್ರವಾಹ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗಿಡ, ಮರಗಳ ಎಲೆಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳು ನದಿಯೊಂದಿಗೆ ಸಮುದ್ರ ಸೇರುತ್ತದೆ. ಹುಣ್ಣಿವೆು ಮತ್ತು ಅಮಾವಾಸ್ಯೆ ಸಂದರ್ಭದಲ್ಲಿರುವ ಉಬ್ಬರದ ನೀರು ಕಸದ ರಾಶಿಯನ್ನೇ ತೀರಕ್ಕೆ ತಂದು ಹಾಕುತ್ತದೆ.

ಸಾಗರದಿಂದ ಮೇಲೆ ಬಿದ್ದ ಕಸ ಅಲ್ಲಿಯೇ ಕೊಳೆತು ಗೊಬ್ಬರವಾಗಿ ಹುಣ್ಣಿಮೆ ಅಥವಾ ಅಮಾವಾಸ್ಯೆ ನೀರಿಗೆ ಪುನಃ ಸಾಗರ ಗರ್ಭ ಸೇರುತ್ತದೆ. ಇದು ಮೀನುಗಳಿಗೆ ಆಹಾರವೂ ಕೂಡ. ಕಳೆದೊಂದು ದಶಕಕ್ಕೆ ಹೋಲಿಸಿದರೆ ತೀರಕ್ಕೆ ಬಂದು ಬೀಳುವ ಕಸದೊಂದಿಗೆ ಕಿಲೋಗಟ್ಟಲೆ ಪ್ಲಾಸ್ಟಿಕ್ ಕೂಡ ಸೇರುತ್ತಿದೆ.

`ಕಡಲತೀರಕ್ಕೆ ಬಂದು ಬೀಳುವ ಕಸದೊಂದಿಗೆ ಪ್ಲಾಸ್ಟಿಕ್ ಸೇರಿರುವುದರಿಂದ ಗೊಬ್ಬರ ಉತ್ಪಾದನೆ ಆಗುವ ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತಿದೆ. ಆದ್ದರಿಂದ ಕಸದಲ್ಲಿ ಪ್ಲಾಸ್ಟಿಕನ್ನು ಮಾತ್ರ ಬೇರ್ಪಡಿಸಬೇಕು. ಕಸದಲ್ಲಿನ ಕೊಳೆತ ಗಿಡ, ಮರಗಳ ಎಲೆಗಳು ಸಾಗರದ ಜೀವಿಗಳಿಗೂ ಆಹಾರವಾದ್ದರಿಂದ ಅದನ್ನು ಅಲ್ಲಿಯೇ ಬಿಡಬೇಕು' ಎಂದು ಕರ್ನಾಟಕ ವಿಶ್ವವಿದ್ಯಾನಿಲಯದ ಸಾಗರ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ. ವಿ.ಎನ್.ನಾಯಕ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.