ADVERTISEMENT

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿಟ್ಟ ಮಣ್ಣು ಸಾಗಾಟ; ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 9:14 IST
Last Updated 20 ನವೆಂಬರ್ 2017, 9:14 IST

ಕಾರವಾರ: ನಗರದಲ್ಲಿ ನಿರ್ಮಾಣವಾಗುತ್ತಿರುವ ರಾಕ್‌ ಗಾರ್ಡನ್‌ಗೆ ತಾಲ್ಲೂಕಿನ ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿಟ್ಟಿದ್ದ ಮಣ್ಣನ್ನು ಶನಿವಾರ ಸಾಗಿಸುತ್ತಿದ್ದ ವೇಳೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಿಸಿದರು.

‘ತ್ಯಾಜ್ಯಗಳನ್ನು ಸಂಗ್ರಹಿಸಿದ ಬಳಿಕ ಅದನ್ನು ಮುಚ್ಚಲು ಮಣ್ಣು ಅವಶ್ಯ ಇರುತ್ತದೆ. ಹೀಗಾಗಿ ತ್ಯಾಜ್ಯ ವಿಲೇವಾರಿ ಘಟಕದ ಬಳಿಯ ಅರಣ್ಯ ಪ್ರದೇಶದ ಸ್ವಲ್ಪ ಭಾಗವನ್ನು ಕಾಯ್ದಿರಿಸಲಾಗಿದೆ. ಆದರೆ, ಕೆಲವು ದಿನಗಳಿಂದ ರಾಕ್‌ ಗಾರ್ಡನ್ ನಿರ್ಮಾಣದ ಗುತ್ತಿಗೆದಾರರು ಇಲ್ಲಿನ ಮಣ್ಣನ್ನು ಟಿಪ್ಪರ್‌ಗಳಲ್ಲಿ ಪ್ರತಿ ದಿನ ಸಾಗಿಸುತ್ತಿದ್ದಾರೆ’ ಎಂದು ಸ್ಥಳಕ್ಕೆ ಬಂದ ಗ್ರಾಮಸ್ಥರು ಹಾಗೂ ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ನಗರಸಭೆ ಕಾರ್ಯನಿವಾಹಕ ಎಂಜಿನಿಯರ್ ಕೆ.ಮೋಹನರಾಜ್ ಸ್ಥಳಕ್ಕೆ ಬಂದು, ‘ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅಭಿವೃದ್ಧಿ ಕಾರ್ಯಕ್ಕಾಗಿ ಮಣ್ಣನ್ನು ಸಾಗಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು. ಇದರಿಂದ ಕುಪಿತಗೊಂಡ ಸ್ಥಳೀಯರು, ‘ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿ ಅವಶ್ಯವಾದ ಮಣ್ಣನ್ನು ಬೇರೆಡೆ ಹೇಗೆ ಸಾಗಿಸುತ್ತೀರಿ? ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನೆಗೆ ಸಿದ್ಧರಾದರು.

ADVERTISEMENT

ಬಳಿಕ ಸ್ಥಳೀಯರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆದು, ಮೋಹನರಾಜ್ ಪೊಲೀಸರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಸಿಪಿಐ ಶಿವಕುಮಾರ ಹಾಗೂ ಪಿಎಸ್‍ಐ ಉಮೇಶ ಪಾವಸ್ಕರ್, ‘ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರನ್ನು ಎಚ್ಚರಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಂಗಾ ನಾಯ್ಕ, ಉಪಾಧ್ಯಕ್ಷ ಜಗದೀಶ ಬಾಂದೇಕರ, ಸದಸ್ಯರಾದ ಮಾರುತಿ ನಾಯ್ಕ, ರಾಜೇಶ ನಾಯ್ಕ, ‘ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಲ್ಲಿನ ಮಣ್ಣು ಅವಶ್ಯವಾಗಿದೆ. ಪೊಲೀಸ್ ಬಲ ಬಳಸಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ಪಂಚಾಯ್ತಿಯ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತಾಗುತ್ತದೆ’ ಎಂದು ತಿಳಿಸಿದರು.

‘ಮಣ್ಣನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಬೇಕಿದ್ದರೆ ನೀವು ಪೊಲೀಸ್ ಬಲ ಬಳಸಿಕೊಳ್ಳಿ. ನಾವು ಇಲ್ಲಿಯೇ ಧರಣಿ ಕೂರುತ್ತೇವೆ’ ಎಂದು ಸದಸ್ಯರಾದ ಕಿಶೋರ ಶೇಜವಾಡಕರ, ನಂದನ ಮಾಂಜ್ರೇಕರ, ಸಮೀರ ಶೇಜವಾಡಕರ ಪ್ರತಿಭಟಿಸಿದರು.

ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜನರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅದು ಫಲಿಸಲಿಲ್ಲ. ಬಳಿಕ ಲೋಡ್ ಆಗಿರುವ 3 ಟಿಪ್ಪರ್‌ ಲಾರಿಗಳ ಸಮೇತ ಅಧಿಕಾರಿಗಳು ವಾಪಸ್ಸಾದರು. ‘ಮತ್ತೆ ಮಣ್ಣು ತೆಗೆಯಲು ಬಂದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ಸ್ಥಳೀಯರು ಎಚ್ಚರಿಕೆ ಕೂಡ ನೀಡಿದರು.

* * 

ಅಧಿಕಾರಿಗಳ ಒತ್ತಡಕ್ಕೆ ಮಣಿದು ಪಂಚನಾಮೆ ನಡೆಸದೇ ಸ್ಥಳದಿಂದ ಪಲಾಯನಗೈದ ಅರಣ್ಯಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಸಬೇಕು.
ಉದಯ ಬಶೆಟ್ಟಿ
ಗ್ರಾಮ ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.