ADVERTISEMENT

ದಸರಾ: ದಾಂಡಿಯಾ ನೃತ್ಯ ವೈಭವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:45 IST
Last Updated 7 ಅಕ್ಟೋಬರ್ 2011, 9:45 IST

ಶಿರಸಿ: ಕಲೆಗೆ ಗಡಿಯ ಮಿತಿಯಿಲ್ಲ. ಜನ ಸಂಸ್ಕೃತಿ ಇದ್ದಲ್ಲಿ ಕಲೆ ಅರಳು ತ್ತದೆ. ಉದ್ಯೋಗಕ್ಕಾಗಿ ಬಂದ ರಾಜಸ್ತಾನಿಗಳು ತಮ್ಮ ಸಾಂಪ್ರ ದಾಯಿಕ ಕಲೆ ದಾಂಡಿಯಾ ನೃತ್ಯದ ರಂಗನ್ನು ಶಿರಸಿಗರಿಗೆ ಪರಿಚಯಿಸುತ್ತಿದ್ದಾರೆ.

ರಾಜಸ್ತಾನಿ ಜನರಿಗೆ ನವರಾತ್ರಿ ವಿಶೇಷ ಹಬ್ಬ. `ನವ~ ರಾತ್ರಿಗಳಲ್ಲೂ ನೃತ್ಯದ ಮೂಲಕ ಮಾತೆ ದುರ್ಗಿಗೆ ನಮನ ಸಲ್ಲಿಸುವದು ರಾಜಸ್ತಾನಿಗರ ಸಂಪ್ರದಾಯ. ಬಟ್ಟೆ ವ್ಯಾಪಾರ, ಸ್ವತಂತ್ರ ಉದ್ಯೋಗಕ್ಕಾಗಿ ಶಿರಸಿಗೆ ಬಂದು ನೆಲೆಸಿರುವ 100ರಷ್ಟು ರಾಜಸ್ತಾನಿ ಕುಟುಂಬಗಳ ಸದಸ್ಯರು ಒಟ್ಟಿಗೆ ಬೆರೆತು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ.
 
ರಾತ್ರಿ ನಗರವೆಲ್ಲ ನಿದ್ರಿಸುತ್ತಿದ್ದರೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ದಾಂಡಿಯಾ ರಂಗು ಕಳೆಗಟ್ಟುತ್ತದೆ. ದುರ್ಗಾದೇವಿಯ ಭಜನೆಗೆ ಮಹಿಳೆಯರು, ಪುರುಷರು, ಮಕ್ಕಳು ಭಾವಪರವಶರಾಗಿ ನರ್ತಿಸುತ್ತಾರೆ. ರಂಗುರಂಗಿನ ಉಡುಪು ತೊಟ್ಟ ಮಹಿಳೆಯರು ನರ್ತಿಸಿದರೆ ಹದಿಹರೆಯದ ಯುವತಿಯರು ಹಸನ್ಮುಖರಾಗಿ ಗುಂಪಿನಲ್ಲಿ ಹೆಜ್ಜೆ ಹಾಕುತ್ತ ಸಾಗುತ್ತಾರೆ. ವೃತ್ತಾಕಾರದ ಗುಂಪು ನೃತ್ಯದಲ್ಲಿ ಮಕ್ಕಳು ಸಹ ತಮ್ಮ ಪಾಲಿನ ಸೇವೆ ಸಲ್ಲಿಸುತ್ತಾರೆ.
 
ಮಹಿಳೆಯರ ನೃತ್ಯದ ನಂತರ ಪುರುಷರ ಸರದಿ. ಕೊನೆಯಲ್ಲಿ ದಂಪತಿಗಳು ಕೈಯಲ್ಲಿ ದಂಡ ಹಿಡಿದು ಕೋಲಾಟ ಆಡುತ್ತಾರೆ. ರಾತ್ರಿ 10ಗಂಟೆ ಸುಮಾರಿಗೆ ಪ್ರಾರಂಭವಾಗುವ ನೃತ್ಯ ಮಧ್ಯರಾತ್ರಿಗೆ ಕೊನೆಗೊಳ್ಳುತ್ತದೆ.

ದಾಂಡಿಯಾ ಪ್ರದರ್ಶನದ ಪೂರ್ವ ದುರ್ಗಾದೇವಿಗೆ ಸಾಮೂಹಿಕ ಪೂಜೆ ನಡೆಯುತ್ತದೆ. ಭಾನುವಾರ ರಾತ್ರಿಯ ದಾಂಡಿಯಾ ನೃತ್ಯದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ರೂಪಾ ಅನಂತಕುಮಾರ ದಂಡ ಹಿಡಿದು ಪರಸ್ಪರ ಕೋಲಾಟ ಆಡಿದರು. ಸೋಮವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡಿದ್ದರು.
 
ನವರಾತ್ರಿಯ ಕೊನೆಯ ಎರಡು ದಿನಗಳಲ್ಲಿ ರಾಜಸ್ತಾನದಿಂದ ವಿಶೇಷ ಭಜನಾ ಮಂಡಳಿ ಕರೆಸಲಾಗುತ್ತದೆ. `ಕಳೆದ 10 ವರ್ಷಗಳಿಂದ ಶಿರಸಿಯಲ್ಲಿ ರಾಜಸ್ತಾನ ವಿಷ್ಣು ಸಮಾಜದ ವತಿಯಿಂದ ದಾಂಡಿಯಾ ನೃತ್ಯ ಪ್ರದರ್ಶಿಸಲಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕಲೆ ಪ್ರದರ್ಶನ, ಆಚರಣೆ ಜೊತೆಗೆ ಸ್ಥಳೀಯ ಹಬ್ಬಗಳಲ್ಲಿ ಸಹ ನಮ್ಮ ಸಮಾಜದವರು ಕ್ರಿಯಾಶೀಲವಾಗಿ ಭಾಗವಹಿಸುತ್ತಾರೆ~ ಎನ್ನುತ್ತಾರೆ ಸಮಾಜದ ಅಧ್ಯಕ್ಷ ಹಸ್ತಿಮಲ್ ಚೌಧರಿ. `ವಿಜಯದಶಮಿಯಂದು ರಾಜಸ್ತಾನಿ ಸಮಾಜದ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ಸಹಭೋಜನ ಮಾಡುತ್ತೇವೆ.

ಸ್ಥಳೀಯ ಗೆಳೆಯರನ್ನು ಆಹ್ವಾನಿಸುತ್ತೇವೆ. ಅವರೊಂದಿಗೂ ನಮ್ಮ ಖುಷಿ ಹಂಚಿಕೊಳ್ಳುತ್ತೇವೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.