ADVERTISEMENT

ದಾಖಲೆ ಬರೆದ ಕೈಗಾದ 32 ವಿದ್ಯಾರ್ಥಿಗಳು

ಸತತ ಒಂದೂವರೆ ಗಂಟೆ ‘ಫಾರ್ವರ್ಡ್ ಲಿಂಬೋ ಸ್ಕೇಟಿಂಗ್‌’ ಮಾಡಿದ ಪುಟಾಣಿಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2018, 12:48 IST
Last Updated 5 ಮೇ 2018, 12:48 IST

ಕಾರವಾರ: ತಾಲ್ಲೂಕಿನ ಕೈಗಾ ವಸತಿ ಸಂಕೀರ್ಣದ ಸ್ಕೇಟಿಂಗ್ ಅಂಕಣವು ಶುಕ್ರವಾರ ದಾಖಲೆಯೊಂದಕ್ಕೆ ಸಾಕ್ಷಿಯಾಯಿತು. 10 ವರ್ಷದ ಒಳಗಿನ 32 ವಿದ್ಯಾರ್ಥಿಗಳು ಸತತ ಒಂದೂವರೆ ಗಂಟೆ ‘ಫಾರ್ವರ್ಡ್ ಲಿಂಬೋ ಸ್ಕೇಟಿಂಗ್‌’ ಮಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. 290 ಮಿ.ಮೀ. (11 ಇಂಚು) ಎತ್ತರದ ಕಬ್ಬಿಣದ ಸರಳಿನ ಕೆಳಗಿನಿಂದ ನುಸುಳುವ ಸವಾಲನ್ನು ಪುಟಾಣಿಗಳು ಲೀಲಾಜಾಲವಾಗಿ ನಿಭಾಯಿಸಿದರು.

ದಾಖಲೆ ಘೋಷಣೆ: ವೀಕ್ಷಕರಾಗಿ ಬಂದಿದ್ದ ‘ರೆಕಾರ್ಡ್ ಹೋಲ್ಡರ್ ರಿಪಬ್ಲಿಕ್ ಯುಕೆ’ಯ ಉಪಾಧ್ಯಕ್ಷ ಡಾ.ಕಪಿಲ್ ಕಾರ್ಲಾ ದಾಖಲೆಯನ್ನು ಘೋಷಿಸಿ ಎಲ್ಲ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.

‘ಬಹು ವರ್ಷಗಳ ಹಿಂದೆ ಚೀನಾ ದೇಶದ 26 ಮಕ್ಕಳು 60 ನಿಮಿಷಗಳವರೆಗೆ ಸ್ಕೇಟಿಂಗ್ ಮಾಡುವ ಮೂಲಕ ‘ಫಾರ್ವರ್ಡ್ ಲಿಂಬೋ ಸ್ಕೇಟಿಂಗ್‌’ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. ಅದನ್ನು ಈಗ ಕೈಗಾದ ಈ ಪುಟಾಣಿಗಳು ಹಿಂದಿಕ್ಕಿದ್ದಾರೆ. ಆ ಮೂಲಕ ಭಾರತದಲ್ಲಿ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ಇದೊಂದು ಹೆಮ್ಮೆಯ ವಿಷಯವಾಗಿದೆ. ಚಿಕ್ಕ ಮಕ್ಕಳು ಈ ಸಾಧನೆ ಮಾಡಲು ಅವರ ಪಾಲಕರು ನೀಡಿರುವ ಪ್ರೋತ್ಸಾಹವೇ ಕಾರಣವಾಗಿದೆ’ ಎಂದು ಡಾ.ಕಪಿಲ್ ಕಾರ್ಲಾ ಅಭಿಪ್ರಾಯಪಟ್ಟರು.

ADVERTISEMENT

‘ನಮ್ಮ ಕ್ಲಬ್‌ನಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಶಿರಸಿಯಲ್ಲಿ ಶಿಬಿರಗಳನ್ನು ನಡೆಸಿ ಅಲ್ಲಿಯೂ 150 ಮಂದಿಯನ್ನು ಸಿದ್ಧಪಡಿಸಿದ್ದೇವೆ. ಜಿಲ್ಲೆಯಲ್ಲಿ ಯಾರೂ ಮಾಡಿರದ ಸಾಧನೆಯನ್ನು ಇಲ್ಲಿನ ವಿದ್ಯಾರ್ಥಿಗಳು ಮಾಡಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದ ಕೈಗಾ ರೋಲರ್ ಕ್ಲಬ್‌ನ ದಿಲೀಪ್ ಹನಬರ್ ಖುಷಿಯನ್ನು ಹಂಚಿಕೊಂಡರು.

ದಾಖಲೆಗೆ ಪಾತ್ರರಾದವರು ಇವರು:‌ ಆದ್ಯಾ ಮಂಜಪ್ಪ ನಾಯ್ಕ, ಆದಿತ್ಯಾ ದತ್ತಾತ್ರೇಯ ನಾಯ್ಕ, ಆದಿತ್ಯಾ ಮಹಾಂತೇಶ ಹಿರೇಮಠ್, ಅದ್ವಿಕಾ ಮಂಜುನಾಥ ಸ್ವಾಮಿ, ಆದ್ಯಾ ಮಂಜುನಾಥ ಸ್ವಾಮಿ, ಐರಾ ಸಂಜೀವಕುಮಾರ ಘಟಕಾಂಬಳೆ, ಅಕ್ಷಯ ಹೇಮಂತ ಸಿರ್ಸಿಕರ್, ಅಮನ್ ರೂಪೇಶ್ ಫಂಡೇಕರ್, ಅಮೋದ್ ಪ್ರಮೋದ ನೇತ್ರೇಕರ್, ಅನುಪ್ ಜ್ಞಾನೇಶ್ವರ್ ಗುನಗಿ, ಅನ್ವಿ ಸಂಜಯ್ ಕುಡ್ತರಕರ್, ಆಪೂರ್ವ ಅನಿಲ್ ಭುಜಲೇ, ಅವಿಜಿತ್ ಮಂಜುನಾಥ ದೇಸಾಯಿ, ಬಿ.ರೋಹನ್ ನಾಗಭೂಷಣಂ, ಬೃಂದಾವನಿ ರಾಜಶೇಖರ್ ಅಬ್ಬಿಗೇರಿ, ಜಾಹ್ನವಿ ಮನೋಜ, ಮೊಹಮ್ಮದ್ ಸುಫಿಯಾನ್ ಶರೀಫ್, ಮೊಹಮ್ಮದ್ ಶಾಕ್ಬಿ, ಮೋಹನ ಹನುಮಂತರಾಯಪ್ಪ, ಮುಕುಂದ ಸರ್ವಣಾ, ನಿಜಗುಣ ಮನೋಹರ್ ಪತ್ತಾರ್, ಪ್ರೇಮಸುರಜ ಪ್ರಕಾಶ ಬನಾವಳಿ, ಪ್ರಿಯದರ್ಶಿನಿ ಮಹಾಂತೇಶ ಹಿರೇಮಠ್, ಸಾತ್ವಿಕ ಮಹಾಂತೇಶ ನಲವ್ತವಾಡ, ಶುಬಿಕುಮಾರಿ ಮುಕುಂದಲಾಲ್ ದಾಸ್, ಶ್ಯಾಮ್ ಸುಮಂತ್ ಹೆಬ್ಬಳೇಕರ್, ಸಿಂಚನಾ ಮಹಾಂತೇಶ ಸಜ್ಜನ್, ಸೊಹಂ ಸತೀಶ್ ತೆಂಡೂಲ್ಕರ್, ಸೊನಾಲ್ ಸತೀಶ್ ನಾಯ್ಕ, ಸೃಷ್ಟಿ ಶಿವಾನಂದ ನಾಯ್ಕ, ಸುತೇಜ್ ಸಿಗಳ್ಳಿ ಗೌಡ, ಟಿ.ಯಶವಂತ ಬಾಲಾಜಿ.

ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಳ ನಿರ್ದೇಶಕ ಸಂಜಯಕುಮಾರ್‌, 3 ಮತ್ತು 4ನೇ ಘಟಕದ ನಿರ್ದೇಶಕ ಜೆ.ಆರ್.ದೇಶಪಾಂಡೆ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಶ್ರೀನಿವಾಸ್ ರಾವ್, ಕೈಗಾ ರೋಲರ್ ಕ್ಲಬ್‌ನ ಅಧ್ಯಕ್ಷ ಶೇಷಯ್ಯ, ಮುಖ್ಯಾಧಿಕಾರಿ ಸುಬ್ಬರಾವ್, ಶ್ರೀಕುಮಾರ್ ಅವರೂ ಹಾಜರಿದ್ದರು.

**
ಮೂರ್ನಾಲ್ಕು ತಿಂಗಳು ದಿನವೂ ಎರಡು ಗಂಟೆಗಳ ತರಬೇತಿ ಪಡೆದಿದ್ದೆವು. ಸಾಧನೆ ಸಾಧ್ಯವಾಗಿದ್ದಕ್ಕೆ ಖುಷಿಯಾಗಿದೆ
– ಸಾತ್ವಿಕ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.