ADVERTISEMENT

‘ಪಕ್ಷದ ಸಾಧನೆಯೇ ಚುನಾವಣೆ ಪ್ರಚಾರ ವಸ್ತು’

ಜೆಡಿಎಸ್‌ನಿಂದ ಮಾತ್ರ ಅಭ್ಯರ್ಥಿಗಳ ಘೋಷಣೆ: ಬಿಜೆಪಿ, ಕಾಂಗ್ರೆಸ್‌ನಿಂದ ಸ್ಪರ್ಧಿಗಳು ಯಾರೆಂಬ ಕುತೂಹಲ

ಸದಾಶಿವ ಎಂ.ಎಸ್‌.
Published 22 ಮಾರ್ಚ್ 2018, 11:11 IST
Last Updated 22 ಮಾರ್ಚ್ 2018, 11:11 IST

ಕಾರವಾರ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿರುವುದರ ಜತೆಗೇ ಚುನಾವಣಾ ಕಾವು ಕೂಡ ನಿಧಾನವಾಗಿ ಹೆಚ್ಚುತ್ತಿದೆ. ಜೆಡಿಎಸ್ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವುದನ್ನು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ತಮ್ಮ ಪಕ್ಷಗಳ ಸಾಧನೆಯೇ ಗೆಲುವಿನ ಮಾನದಂಡ ಎನ್ನುತ್ತಿದ್ದಾರೆ ಆಯಾ ಪಕ್ಷಗಳ ಮುಖಂಡರು.

‘ಪಕ್ಷವು ನನಗೆ ಮೊದಲೇ ಟಿಕೆಟ್ ಘೋಷಣೆ ಮಾಡಿರುವ ಕಾರಣ ಹೆಚ್ಚು ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ಸಹಕಾರಿಯಾಗಿದೆ. ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನು ಕೇವಲ ಆರು ಗ್ರಾಮ ಪಂಚಾಯ್ತಿಗಳಲ್ಲಿ ಖುದ್ದು ಪ್ರಚಾರ ಕಾರ್ಯ ಹಮ್ಮಿಕೊಳ್ಳಲು ಬಾಕಿಯಿದೆ. ನಂತರ ಕಾರವಾರ ನಗರ ಮತ್ತು ಅಂಕೋಲಾ ಪಟ್ಟಣದಲ್ಲಿ ಮತದಾರರನ್ನು ಭೇಟಿ ಮಾಡಲಿದ್ದೇನೆ’ ಎನ್ನುತ್ತಾರೆ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್.

‘ಜ.15ರಂದು ಬಿಡುಗಡೆಯಾದ ಮೊದಲ ಪಟ್ಟಿಯಲ್ಲೇ ವರಿಷ್ಠರು ನನಗೆ ಟಿಕೆಟ್ ಘೋಷಿಸಿದರು. ಅಂದಿನಿಂದ ಪ್ರತಿದಿನ 6–7 ಹಳ್ಳಿಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುತ್ತಿದ್ದೇನೆ. ಎಲ್ಲ ಕಡೆಯೂ ಉತ್ತಮ ಸ್ಪಂದನೆ ಸಿಗುತ್ತಿದೆ. ನಾನು ಶಾಸಕನಾಗಿ ಆಯ್ಕೆಯಾಗುವುದನ್ನೇ ಅವರು ಕಾಯುತ್ತಿದ್ದಾರೆ. ಹಾಲಿ ಶಾಸಕರು ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜನರಿಂದ ದೂರ ಉಳಿದಿದ್ದೇ ಇದಕ್ಕೆ ಕಾರಣ’ ಎಂಬ ಆರೋಪ ಅವರದ್ದು.

ADVERTISEMENT

‘ಹಿನ್ನಡೆಯಾಗದು’: ‘ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡದಿರುವುದರಿಂದ ಪ್ರಚಾರ ಕಾರ್ಯಕ್ಕೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ. ಅಭ್ಯರ್ಥಿ ಘೋಷಣೆಯಾಗಿಲ್ಲ ಎಂಬುದನ್ನು ಹೊರತುಪಡಿಸಿದರೆ, ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಾಧನೆ ಅತ್ಯುತ್ತಮವಾಗಿದೆ. ಅದು ಕೂಡ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಲಿದೆ’ ಎನ್ನುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ.

‘ಜೆಡಿಎಸ್‌ಗೆ ಜಿಲ್ಲೆಯಲ್ಲಿ ನೆಲೆಯಿಲ್ಲ. ಆ ಪಕ್ಷದ ಮುಖಂಡರು ಶೂನ್ಯದಿಂದ ಆರಂಭಿಸಬೇಕಿದೆ. ಆದ್ದರಿಂದ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಜಿಲ್ಲೆಯಲ್ಲಿ ಉತ್ತಮ ಬೆಂಬಲವಿರುವ ಕಾರಣ ಅಭ್ಯರ್ಥಿ ಘೋಷಣೆಯಾಗದಿರುವುದು ಸಮಸ್ಯೆಯೇ ಅಲ್ಲ’ ಎನ್ನುತ್ತಾರೆ ಅವರು.

‘ಅಭಿವೃದ್ಧಿ ಕಾರ್ಯಗಳೇ ಮಾನದಂಡ’: ಬಿಜೆಪಿ ಮುಖಂಡರ ಮಾತುಗಳಿಗೆ ಹೋಲಿಕೆಯಾಗುವ ಅಭಿಪ್ರಾಯಗಳನ್ನೇ ಕಾಂಗ್ರೆಸ್ ಮುಖಂಡರೂ ವ್ಯಕ್ತಪಡಿಸುತ್ತಾರೆ.

ಪಕ್ಷದ ಜಿಲ್ಲಾ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಸಮನ್ವಯಕಾರ ದೀಪಕ್ ದೊಡ್ಡೂರು, ‘ಕಾಂಗ್ರೆಸ್ ಸಾಮಾಜಿಕ ನ್ಯಾಯದ ಮೇಲೆ ನಿಂತಿರುವ ಪಕ್ಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮಂಜೂರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯಲ್ಲಿ ಮತ ಕೇಳಲು ಮುಖ್ಯ ಮಾನದಂಡವಾಗಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ಜನಬೆಂಬಲವಿದೆ. ಮತದಾರರು ಅಭ್ಯರ್ಥಿಗಿಂತ ಪಕ್ಷದ ಮೇಲೆ ನಂಬಿಕೆಯಿಟ್ಟು ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಅವರು.
**
‘ಈ ತಿಂಗಳ ಕೊನೆಗೆ ಬಿಜೆಪಿ ಪಟ್ಟಿ’
‘ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಈ ತಿಂಗಳ ಕೊನೆಯಲ್ಲಿ ಪ್ರಕಟವಾಗಲಿದೆ. ನಂತರ ಪ್ರಚಾರ ಕಾರ್ಯ ಮತ್ತಷ್ಟು ಬಿರುಸಾಗಲಿದೆ’ ಎನ್ನುತ್ತಾರೆ ಕೆ.ಜಿ.ನಾಯ್ಕ.

‘ಪ್ರಚಾರಕಾರ್ಯದಲ್ಲಿ ನಾವೇನೂ ಹಿಂದೆ ಬಿದ್ದಿಲ್ಲ. ಇದೇ 24ರಂದು ಸಂಜೆ 4.30ಕ್ಕೆ ಗುಜರಾತ್‌ನ ಖೇಡಾ ಕ್ಷೇತ್ರದ ಸಂಸದ ದೇವುಸಿನ್ಹ ಜೆಸಿಂಗ್‌ಭಾಯ್ ಚೌಹಾಣ್ ಭಟ್ಕಳಕ್ಕೆ ಭೇಟಿ ನೀಡಲಿದ್ದಾರೆ. 25ರಂದು ಬೆಳಿಗ್ಗೆ 9ಕ್ಕೆ ಕುಮಟಾ, ಮಧ್ಯಾಹ್ನ 12ಕ್ಕೆ ಶಿರಸಿ ಹಾಗೂ ಮಧ್ಯಾಹ್ನ 3.30ಕ್ಕೆ ಯಲ್ಲಾಪುರದಲ್ಲಿ ವಿವಿಧ ಬೂತ್‌ ಮಟ್ಟದ ಪದಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಉತ್ತರಭಾರತದ ನಾಯಕರು ಬಂದು ಮಾತನಾಡಿದರೆ ಸ್ಥಳೀಯ ಪದಾಧಿಕಾರಿಗಳಿಗೆ ಭಾಷಾ ತೊಡಕು ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರೆ, ‘ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ಹಿಂದಿಗೆ ಭಾಷಾಂತರ ಮಾಡುತ್ತೇವೆ’ ಎಂದು ಉತ್ತರಿಸಿದರು.
**
‘ಸಾಮಾಜಿಕ ಜಾಲತಾಣಗಳು ಸಕ್ರಿಯ’
‘ಜಿಲ್ಲಾ ಕಾಂಗ್ರೆಸ್ ಸಮಿತಿಯು ವಿಧಾನಸಭಾ ಕ್ಷೇತ್ರವಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿದೆ. ಅವುಗಳ ಮೂಲಕ ಸರ್ಕಾರದ ಪರ ಪ್ರಚಾರ ಕಾರ್ಯ, ಮಾಹಿತಿಗಳ ಹಂಚಿಕೆ ನಡೆಯುತ್ತಿದೆ’ ಎನ್ನುತ್ತಾರೆ ದೀಪಕ್ ದೊಡ್ಡೂರು.

‘ಟ್ವಿಟರ್‌ನಲ್ಲಿ ‘ಪೋಸ್ಟ್‌’ ಮಾಡಿದ ಬರಹಗಳು ದೇಶದಾದ್ಯಂತ ಎಲ್ಲರಿಗೂ ಕಾಣಸಿಗುತ್ತವೆ. ಸುಮ್ಮನೆ ಏನೇನೋ ಬರೆಯಲಾಗುವುದಿಲ್ಲ. ಆದ್ದರಿಂದ ಅಲ್ಲೇನಾದರೂ ಗಂಭೀರವಾದ ವಿಚಾರಗಳನ್ನು ಮಾತ್ರ ಬರೆಯಬೇಕು. ಅದೇರೀತಿ, ಆಯ್ದ ವಿಚಾರಗಳಿಗೆ ಮಾತ್ರ ಕಮೆಂಟ್ ಮಾಡಬೇಕು. ಹಾಗಾಗಿ ನಮ್ಮ ಟ್ವೀಟ್‌ಗಳ ಸಂಖ್ಯೆ ಕಡಿಮೆಯಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇವೆ. ಆದರೆ, ಫೇಸ್‌ಬುಕ್‌ನಲ್ಲಿ ತುಂಬ ಸಂಖ್ಯೆಯಲ್ಲಿ ಬೆಂಬಲಿಗರಿದ್ದು, ಲೈಕ್ಸ್, ಕಮೆಂಟ್ಸ್ ಹಾಗೂ ಶೇರಿಂಗ್ ನಡೆಯುತ್ತಿದೆ’ ಎಂದು ತೃಪ್ತಿ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.