ADVERTISEMENT

ಬಾವಳ ಕಡಲತೀರದಲ್ಲಿ ತುರ್ತು ಪರಿಸ್ಥಿತಿ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 8:40 IST
Last Updated 11 ಆಗಸ್ಟ್ 2012, 8:40 IST

ಕಾರವಾರ: ಚಂಡಮಾರುತ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ಶುಕ್ರವಾರ ತಾಲ್ಲೂಕಿನ ಬಾವಳ ಗ್ರಾಮದ ಕಡಲತೀರದಲ್ಲಿ ನಡೆಯಿತು. ಸರಿಯಾಗಿ 11ಕ್ಕೆ ಜಿಲ್ಲಾಧಿಕಾರಿ ಇಂಕೋಂಗ್ಲಾ ಜಮೀರ್ ಅವರು ತುರ್ತುಸ್ಥಿತಿಯನ್ನು ಘೋಷಣೆ ಮಾಡಿದರು.

ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ, ಪೊಲೀಸರು, ಆರೋಗ್ಯ ಇಲಾಖೆ, ಕಡಲ್ಗಾವಲು ಪಡೆ, ಕರಾವಳಿ ಕಾವಲು ಪಡೆ ಸಿಬ್ಬಂದಿ ಕಡಲದಂಡೆಯಲ್ಲಿರುವ ನಾಗರಿಕರ ರಕ್ಷಣೆಗೆ ಆಗಮಿಸಿದರು.

ಕಡಲ ಕಿನಾರೆಯಲ್ಲಿದ್ದ ಮೀನುಗಾರರು ಮತ್ತು ಮನೆಯಲ್ಲಿದ್ದವರನ್ನು ಹೊರತಂದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಗಾಯಾಳುಗಳನ್ನು ಸಮೀಪದ ಯೂನಿಟ್ ಹೈಸ್ಕೂಲ್‌ನಲ್ಲಿ ಆರಂಭಿಸಿದ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆ ನೀಡಲಾಯಿತು.

ಕಡಲತೀರದಲ್ಲಿ ಪತ್ತೆಯಾದ ಎರಡು ಮೃತದೇಹಗಳನ್ನು ಆರೋಗ್ಯ ಕೇಂದ್ರದ ಸಿಬ್ಬಂದಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು.

ಕಾರ್ಯಾಚರಣೆ ಪ್ರಾರಂಭವಾದ ಕೆಲವೇ ಹೊತ್ತಿನಲ್ಲಿ ಸುರಿದ ಮಳೆ ಅಣಕು ಕಾರ್ಯಚರಣೆಗೆ ಅಡ್ಡಿಯನ್ನುಂಟು ಮಾಡಿತು. ಮಳೆಯಲ್ಲೇ ನೆನೆಯುತ್ತಲೇ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಅಣಕು ಪ್ರದರ್ಶನದ ವೇಳೆ ಸಾರ್ವಜನಿಕರು ಭಯಪಡದಂತೆ ಧ್ವನಿ ವರ್ಧಕದ ಮೂಲಕ ಸೂಚನೆ ನೀಡಲಾಗುತ್ತಿತ್ತು. 

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಭಾಷ ಗುಡಿಮನಿ, ಉಪವಿಭಾಗಾಧಿಕಾರಿ ಪುಷ್ಪಲತಾ, ತಹಶೀಲ್ದಾರ ಸಾಜಿದ್ ಮುಲ್ಲಾ, ನಗರಸಭೆ ಆಯುಕ್ತ ಉದಯಕುಮಾರ ಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.