ADVERTISEMENT

ಬಾವಿಯಿಂದ ಎದ್ದ ಚಿರತೆ ಕಾಡಿಗೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 10:40 IST
Last Updated 11 ಮಾರ್ಚ್ 2011, 10:40 IST

ಅಂಕೋಲಾ: ಸಮೀಪದ ಜಮಗೋಡ ಗ್ರಾಮದ ಮನೆಯೊಂದರ ಬಾವಿಯಲ್ಲಿ ಮಂಗಳವಾರ ರಾತ್ರಿ ಬಿದ್ದ ಚಿರತೆಯನ್ನು ಗುರುವಾರ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. 

ಊರ ಹೊರವಲಯದಲ್ಲಿರುವ ವಾಮನ ಸುಕ್ರು ಗೌಡ ಇವರ ಮನೆಯ ಹಿಂಭಾಗದಲ್ಲಿ  ಮಂಗಳವಾರ ರಾತ್ರಿ  ಆಹಾರವನ್ನು ಅರಸಿಕೊಂಡು ಬಂದ ಚಿರತೆ ಆಯ ತಪ್ಪಿ ಬಾವಿಗೆ ಬಿದ್ದಿತ್ತು ಎನ್ನಲಾಗಿದೆ. ಮನೆಯ ಮಂದಿ ಬುಧವಾರ ಬೆಳಗಿನ ಜಾವ ಗ್ರಾಮಸ್ಥರ ಜೊತೆಗೆ ಬಾವಿಯಲ್ಲಿ ಇಣುಕಿದಾಗ ಬೆದರಿದ ಚಿರತೆ ಬಾವಿಯ ಗೋಡೆಯಲ್ಲಿನ ಕೊರಕಲಿನಲ್ಲಿ ಅವಿ ತು ಕುಳಿತುಕೊಂಡಿತು.
 
ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ಜಿಲ್ಲಾ ಅರಣ್ಯ ಅಧಿಕಾರಿ ಆರ್. ಗೋಕುಲ್, ಎಸಿಎಫ್ ಅರವಿಂದ ಕಣಗೀಲ ಮತ್ತು ಆರ್‌ಎಫ್‌ಓ ಅಜೀಜ್ ಅವರ ತಂಡಕ್ಕೆ, ಬಾವಿಯಲ್ಲಿ ಕೇವಲ 2 ಅಡಿ ನೀರು ಇದ್ದುದರಿಂದ ಚಿರತೆಯನ್ನು ಕೊರಕಲಿನಿಂದ ಹೊರಗೆ ಬರುವಂತೆ ಮಾಡಿ ಬಲೆಗೆ ಬೀಳಿಸುವ ಸವಾಲು ಎದುರಿಸಬೇಕಾಯಿತು.  ಜಿಲ್ಲಾ ಅಗ್ನಿಶಾಮಕ ದಳದವರನ್ನು ಕರೆಸಿ ಬಾವಿಗೆ ನೀರು ತುಂಬಿಸಿದರು. ಸಹಜವಾಗಿ ನೀರಲ್ಲಿ ಈಜಲಾರಂಭಿಸಿದ ಚಿರತೆ ಮೊದಲೇ ಹರಡಿದ್ದ  ಬಲೆಯಲ್ಲಿ ಬಿದ್ದಿತು.

ಅರವಳಿಕೆ ಚುಚ್ಚುಮದ್ದು ಬಳಸದೇ ಚಿರತೆಯನ್ನು ಹೊರತೆಗೆದು ಅರಣ್ಯಕ್ಕೆ ಸಾಗಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಯಿತು. ಎರಡು ವರ್ಷ ವಯಸ್ಸಿನ ಈ ಗಂಡು ಚಿರತೆ ಆರೋಗ್ಯಪೂರ್ಣವಾಗಿದೆ. ಇದನ್ನು ಗುಳೆ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.