ADVERTISEMENT

ಭತ್ತದ ಗೋದಾಮು ಈಗ ಅಕ್ಷರ ಕಣಜ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 6:40 IST
Last Updated 17 ಏಪ್ರಿಲ್ 2011, 6:40 IST

ಸಿದ್ದಾಪುರ: ಅತ್ಯಂತ ಒಳಪ್ರದೇಶದ ಗ್ರಾಮೀಣ ಪರಿಸರದಲ್ಲಿ ಐವತ್ತು ವರ್ಷಗಳ ಹಿಂದೆ ಪ್ರಾರಂಭಗೊಂಡ ತಾಲ್ಲೂಕಿನ ಅರೇಹಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಏ.17ರಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಮಲೆನಾಡಿನ ಗುಡ್ಡ-ಬೆಟ್ಟಗಳ ವನಸಿರಿಯ ಮಧ್ಯೆ ಸುಂದರವಾಗಿ ಕಂಗೊಳಿಸುವ ಅರೇಹಳ್ಳದ ಈ ಸರ್ಕಾರಿ ಶಾಲೆ ಪ್ರಾರಂಭವಾದ ಸಂದರ್ಭ ಕಷ್ಟದಾಯಕವಾಗಿತ್ತು. 1960ರಲ್ಲಿ ಊರಿನ ಜಪದ ಕಟ್ಟೆಯಲ್ಲಿ ಪ್ರಾರಂಭಗೊಂಡ ಈ ಶಾಲೆ, ನಂತರ ಪಣತದ ಮನೆ (ಭತ್ತವನ್ನು ಸಂಗ್ರಹಿಸುವ ಗೋದಾಮು) ಯಲ್ಲಿ ಮುಂದುವರಿಯಿತು. ಕಂಚಿಕೈ ಮಹಾಬಲೇಶ್ವರ ಹೆಗಡೆ, ಅರೇಹಳ್ಳದ ಕೃಷ್ಣ ನಾಯ್ಕ ಮತ್ತು ಇತರ ಹಲವರ ಸಹಕಾರದೊಂದಿಗೆ ಪ್ರಾರಂಭದ ಬೆಳವಣಿಗೆ ಕಂಡ ಶಾಲೆಗೆ ನಂತರ ಗುಡ್ಡದ ಮೇಲೆ ಹೆಂಚಿನ ಮನೆಯೊಂದನ್ನು ನಿರ್ಮಿಸಲಾಯಿತು. ಕನ್ನಾ ನಾಯ್ಕ ಅವರು ಶಾಲೆಯ ಸಮಿತಿಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಪ್ರಾರಂಭದಲ್ಲಿ ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದ ಅರೇಹಳ್ಳ ಶಾಲೆ ನಂತರ ಎರಡು ಕೊಠಡಿಗಳಿಗೆ ವಿಸ್ತರಣೆಗೊಂಡಿತು. ಕಳೆದ 8 ವರ್ಷಗಳ ಹಿಂದೆ ಶಾಲೆಯ ಅಭಿವೃದ್ಧಿಯಲ್ಲಿಯೂ ವೇಗ ಕಾಣಿಸಿಕೊಂಡಿತು. ಜಿ.ಪಂ, ಗ್ರಾ.ಪಂ. ಮತ್ತಿತರ ಇಲಾಖೆಗಳ ಸಹಕಾರದೊಂದಿಗೆ ಕುಡಿಯುವ ನೀರಿನ ಬಾವಿ, ರಂಗ ಮಂದಿರ, ಬಿಸಿಯೂಟದ ಕೊಠಡಿ, ಉಗ್ರಾಣ ನಿರ್ಮಾಣಗೊಂಡವು.  ಸರ್ವ ಶಿಕ್ಷಣ ಅಭಿಯಾನದಲ್ಲಿ ಹೊಸದಾದ ಹೆಚ್ಚುವರಿ ಕಟ್ಟಡ ನಿರ್ಮಿಸಲಾಯಿತು. ಈಗ ಶಾಲೆ ಸಾಕಷ್ಟು ಸುಸಜ್ಜಿತವಾಗಿದ್ದು,ಶೌಚಾಲಯ,ಕುಡಿಯುವ ನೀರು, ಆಟದ ಮೈದಾನ,ವಿದ್ಯುತ್ ವ್ಯವಸ್ಥೆ,ಕಂಪೌಂಡ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಶಿರಸಿಯ ರೋಟರಿ ಕ್ಲಬ್ ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಟ್ಟಿದೆ.

ADVERTISEMENT

ಮೊದಲು ಕೇವಲ ನಾಲ್ಕನೇ ತರಗತಿಯವರೆಗೆ ಮಾತ್ರವಿದ್ದ ಈ ಶಾಲೆ, ನಂತರ  ಹಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾಯಿತು. ಈಗ ಈ ಶಾಲೆ  ಸುತ್ತಮುತ್ತಲಿನ ಪ್ರದೇಶದ ಶಿಕ್ಷಣ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಪ್ರಸ್ತುತದಲ್ಲಿ ಉತ್ಸಾಹಿ ಶಿಕ್ಷಕ ಸಿ.ಕೆ.ಹೆಗಡೆ ಹೊಸಕೊಪ್ಪ ಸೇರಿದಂತೆ ನಾಲ್ವರು  ಶಿಕ್ಷಣದ ಸೇವೆ ಸಲ್ಲಿಸುತ್ತಿದ್ದಾರೆ. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಗಣಪತಿ ಎಚ್.ನಾಯ್ಕ ಮತ್ತು ಕಾರ್ಯದರ್ಶಿಯಾಗಿ ಆಗ್ನೇಲ್ ಫನಾರ್ಂಡೀಸ್ ಕಾರ್ಯನಿರ್ವಹಿಸುತ್ತಿದ್ದಾರೆ.

ಏ.17ರಂದು ಸಂಜೆ 4ಕ್ಕೆ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರ ಗಣ್ಯರು ಉಪಸ್ಥಿತರಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.