ADVERTISEMENT

ಭಾರಿ ಮಳೆಯಿಂದ 23 ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2011, 4:20 IST
Last Updated 6 ಆಗಸ್ಟ್ 2011, 4:20 IST
ಭಾರಿ ಮಳೆಯಿಂದ 23 ಮನೆಗೆ ಹಾನಿ
ಭಾರಿ ಮಳೆಯಿಂದ 23 ಮನೆಗೆ ಹಾನಿ   

ಸಿದ್ದಾಪುರ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಒಟ್ಟು 23 ಮನೆಗಳಿಗೆ ಹಾನಿಯಾಗಿದ್ದು, ಮಳೆಯಿಂದ ಉಂಟಾದ ಬೆಳೆ ಹಾನಿಯ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ ಗಣಪತಿ ಕಟ್ಟಿನಕೆರೆ ತಿಳಿಸಿದರು.

ಶುಕ್ರವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಪಂಚಾಯಿತಿಯ ಮಾಸಿಕ ಪ್ರಗತಿ ಪರಿಶೀಲನೆ (ಕೆ.ಡಿ.ಪಿ.) ಸಭೆಯಲ್ಲಿ ಅವರು ಮಾತನಾಡಿದರು.

ಮಳೆಯಿಂದ ಒಂದು ಮನೆ ಸಂಪೂರ್ಣ ಹಾನಿ ಗೊಳಗಾಗಿದ್ದು, ಉಳಿದವು ಭಾಗಶಃ ಹಾನಿಗೊಳಗಾಗಿವೆ. ಪೂರ್ಣ ಹಾನಿಗೊಳಗಾದ ಮನೆಗೆ ಪರಿಹಾರ ಮಂಜೂರಾಗಿದೆ. ಉಳಿದ ಮನೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಮನೆಗಳ ಹಾನಿಯ ಬಗ್ಗೆ ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಶಿರಸಿ ಕಚೇರಿಯಿಂದ ವರದಿ ಬರಬೇಕಾಗಿರುವುದರಿಂದ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದರು.

ಸೇತುವೆ ಮತ್ತು ರಸ್ತೆಗಳ ಕಾಮಗಾರಿಗಳ ಅಂದಾಜು ವೆಚ್ಚದ ವರದಿ ಕೂಡ ಜಿ.ಪಂ. ಎಂಜಿನಿಯರಿಂಗ್‌ನ ಶಿರಸಿ ಕಚೇರಿಯಿಂದಲೇ ಬರಬೇಕಾಗಿದ್ದು, ಇದರಿಂದ  ಕಾಮಗಾರಿ ಕೂಡ ವಿಳಂಬವಾಗುತ್ತಿದೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿ.ಎಸ್. ಹೆಗಡೆ ಅಭಿಪ್ರಾಯಪಟ್ಟರು.

ಪಟ್ಟಣದ ನೆಮ್ಮದಿ ಕೇಂದ್ರವನ್ನು ಬಸ್ ನಿಲ್ದಾಣದ ಸಮೀಪ ಸ್ಥಳಾಂತರಿಸುವಂತೆ ಕಳೆದ ತಿಂಗಳು ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಲಾಗಿತ್ತು ಎಂದು ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ ಹೇಳಿದಾಗ ಪ್ರತಿಕ್ರಿಯಿಸಿದ ತಹಸೀಲ್ದಾರರು, ಸಂಬಂಧಿಸಿದ ಸಂಸ್ಥೆಯವರಿಗೆ ಆ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ವಿದ್ಯುತ್ ಸಮಸ್ಯೆ: ಹೆಸ್ಕಾಂನ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಪ್ರಸನ್ನ ಹೆಗಡೆ, ತಾಲ್ಲೂಕಿನ ಬಿಳಗಿ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಅಲ್ಲಿನ ಸಿಬ್ಬಂದಿಗೆ ಈ ಬಗ್ಗೆ  ಕೇಳಿದರೆ ಉದ್ದಟತನದ ಉತ್ತರ ನೀಡಿದ್ದಾರೆ.  ಈ ರೀತಿ ವರ್ತಿಸಿದ ಸಿಬ್ಬಂದಿಗೆ ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂನ ಸಹಾಯಕ ಎಂಜಿನಿಯರ್ ಎಸ್. ಜಿ.ಹೆಗಡೆ, ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಹಲವೆಡೆ  ಈಗಾಗಲೇ ಲೋಡ್  ಶೆಡ್ಡಿಂಗ್ ಜಾರಿ ಮಾಡ ಲಾಗಿದ್ದು, ತಾಲ್ಲೂಕಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಗಾಗ ವ್ಯತ್ಯಯ ಉಂಟಾಗುತ್ತಿರುವುದರಿಂದ ಲೋಡ್ ಶೆಡ್ಡಿಂಗ್  ಜಾರಿ ಮಾಡಿಲ್ಲ ಎಂದು   ಎಸ್. ಜಿ.ಹೆಗಡೆ ತಿಳಿಸಿದರು.

ತೋಟಗಾರಿಕಾ ಇಲಾಖೆಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೃಷ್ಣಪ್ಪ, ರಾಷ್ಟ್ರೀಯ ತೋಟಗಾರಿಕಾ ಮಿಶನ್ ಯೋಜನೆಯಡಿ ವಿವಿಧ ಬೆಳೆಗಳ ಪ್ರದೇಶ ವಿಸ್ತರಣೆಗೆ ನೀಡಲಾಗುವ ಸಹಾಯಧನದ ವಿವರ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ್ ವಹಿಸಿದ್ದರು. ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಸದಸ್ಯ ನೀಲಕಂಠ ಗೌಡರ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ವಿ.ಎಸ್.ಹೆಗಡೆ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.