ADVERTISEMENT

`ಮತದಾನ-ವಿದ್ಯಾರ್ಥಿಗಳ ಮೂಲಕ ಜಾಗೃತಿ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 6:14 IST
Last Updated 5 ಏಪ್ರಿಲ್ 2013, 6:14 IST

ಕಾರವಾರ: `ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಕಡ್ಡಾಯವಾಗಿ ಮತದಾನ ಮಾಡುವುದು ಸೇರಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ವಿದ್ಯಾರ್ಥಿಗಳ ಮೂಲಕ ನಡೆಸಬೇಕು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರೇವಣ ಸಿದ್ದಪ್ಪ ಹೇಳಿದರು.

ನಗರದ ಬಿಲ್ಟ್ ವೃತ್ತದ ಸಮೀಪವಿರುವ ಡಿಡಿಪಿಐ ಕಚೇರಿಯಲ್ಲಿ ಗುರುವಾರ ನಡೆದ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಾಗಾರದಲ್ಲಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ ಅವರು, ಈ ತಿಂಗಳ ಸಮುದಾಯತ್ತ ಶಾಲೆ ಕಾರ್ಯಕ್ರಮದ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಂದ ಜಾಥಾ, ಪ್ರಭಾತಪೇರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು' ಎಂದರು.

`ಮತದಾನಕ್ಕೆ ತಮ್ಮ ಪಾಲಕರನ್ನು ಪ್ರೇರೇಪಿಸುವಂತೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕು. ಫಲಿತಾಂಶ ಪ್ರಕಟಣೆಯ ದಿನಗಳಲ್ಲಿ ಶಾಲೆಗೆ ಬರುವ ಪಾಲಕರಿಗೆ ಮತದಾನದ ಮಹತ್ವದ ಬಗ್ಗೆ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಅವರ ಮನ ಒಲಿಸುವ ಕಾರ್ಯ ಮಾಡಬೇಕು' ಎಂದು ನುಡಿದರು.

`ಶಿಕ್ಷಣ ಇಲಾಖೆ ವತಿಯಿಂದ ಮತಗಟ್ಟೆ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸುವ ಅರ್ಜಿ ನಮೂನೆ 6 ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಲಭ್ಯವಿದೆ. ಮತಗಟ್ಟೆ ಅಧಿಕಾರಿಗಳ ಬಳಿ ಕಳೆದ ಮತದಾನದ ವೇಳೆ ಮತ ಚಲಾಯಿಸದಿರುವ ವ್ಯಕ್ತಿಗಳ ಪಟ್ಟಿಯಿದೆ. ಅಂತಹ ವ್ಯಕ್ತಿಗಳನ್ನು ಸಂಪರ್ಕಿಸಿ ಈ ಬಾರಿ ಮತ ಚಲಾಯಿಸುವಂತೆ ಮನವೊಲಿಸುವ ಕಾರ್ಯವನ್ನು ಮಾಡಬಹುದಾಗಿದೆ' ಎಂದರು.

ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಮಾತನಾಡಿ, ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗ ವ್ಯಾಪಕವಾಗಿ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ದೇಶನಗಳನ್ನು ನೀಡಿದೆ. ಜಿಲ್ಲಾ ಮಟ್ಟದಲ್ಲಿ ಜಿ. ಪಂ. ಸಿಇಓ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲ ಪ್ರಮುಖ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯಕ್, ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ಶಿಕ್ಷಣ ಅಧಿಕಾರಿ ರಾಮಕೃಷ್ಣ ನಾಯಕ್, ಬ್ಲಾಕ್ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಣ ಸಂಯೋಜಕರು, ಕ್ಲಸ್ಟರ್ ಸಮೂಹ ಸಂಪನ್ಮೂಲ ಶಿಕ್ಷಕರು ಕಾರ್ಯಾಗಾರದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.