ADVERTISEMENT

ಮುಚ್ಚಿದ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:26 IST
Last Updated 22 ಜೂನ್ 2013, 11:26 IST

ಶಿರಸಿ: ವಿದ್ಯುತ್ ಪೂರೈಕೆಯಲ್ಲಿ ಎದುರಾಗುವ ವಿಳಂಬ ನಿಯಂತ್ರಿಸುವ ನಿಟ್ಟಿನಲ್ಲಿ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಅನುಕೂಲವಾಗಲೆಂದು ಆರಂಭಿಸಿದ್ದ ಶಿರಸಿ ವಿಭಾಗದ ವಿದ್ಯುತ್ ವಿತರಕ ದುರಸ್ತಿ ಕೇಂದ್ರ ಬಾಗಿಲು ಮುಚ್ಚಿದೆ. ಇದರಿಂದ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ದೂರದ ಹುಬ್ಬಳ್ಳಿಗೆ ಕೊಂಡೊಯ್ದು ದುರಸ್ತಿ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಇಲ್ಲಿನ ಹೆಸ್ಕಾಂ ಕಚೇರಿಗೆ ಎದುರಾಗಿದೆ.

ಮಳೆಗಾಲದಲ್ಲಿ ಕಾಡಿನ ನಡುವೆ ಹಾದು ಹೋಗುವ ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು ಲೈನ್ ಹರಿದು ಬೀಳುವುದು, ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗುವುದು ಮಲೆನಾಡಿನ ಭಾಗದಲ್ಲಿ ಸರ್ವೇಸಾಮಾನ್ಯ. ಇದರಿಂದ ಅನೇಕ ಹಳ್ಳಿಗಳು ವಾರಗಟ್ಟಲೆ ಕತ್ತಲೆಯಲ್ಲಿ ದಿನ ಕಳೆಯುತ್ತವೆ. ಇಂತಹ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಉದ್ದೇಶದಿಂದ ಬಹುದಿನಗಳ ಬೇಡಿಕೆಯಾಗಿದ್ದ ವಿದ್ಯುತ್ ಪರಿವರ್ತಕಸ ದುರಸ್ತಿ ಕೇಂದ್ರವನ್ನು ಮೂರೂವರೆ ವರ್ಷಗಳ ಹಿಂದೆ ಘಟ್ಟದ ಮೇಲಿನ ಆರು ತಾಲ್ಲೂಕುಗಳನ್ನು ಒಳಗೊಂಡು ಶಿರಸಿಯಲ್ಲಿ ಪ್ರಾರಂಭಿಸಲಾಗಿತ್ತು.

ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳು ಶಿರಸಿ ಕೇಂದ್ರಕ್ಕೆ ಬಂದು ಶೀಘ್ರ ರಿಪೇರಿಯಾಗಿ ಸ್ವಸ್ಥಾನಕ್ಕೆ ಮರಳುತ್ತಿದ್ದವು. ಆದರೆ ಆರು ತಿಂಗಳ ಹಿಂದೆ ಡಿಸೆಂಬರ್‌ನಲ್ಲಿ ದುರಸ್ತಿ ಕೇಂದ್ರದ ಕದ ಮುಚ್ಚಿದ್ದು, ಮತ್ತೆ ಹಿಂದಿನಂತೆ ದೂರದ ಹುಬ್ಬಳ್ಳಿಯ ದುರಸ್ತಿ ಕೇಂದ್ರಕ್ಕೆ ಕೆಟ್ಟು ಹೋಗಿರುವ ಟಿಸಿಗಳನ್ನು ವಾಹನದಲ್ಲಿ ಕೊಂಡೊಯ್ದು ರಿಪೇರಿಯಾದ ನಂತರ ಇಲ್ಲಿಂದಲೇ ಮತ್ತೆ ವಾಹನ ತೆಗೆದುಕೊಂಡು ಹೋಗಿ ಟಿಸಿ ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ನಿರಂತರ ಗಾಳಿ- ಮಳೆ ಇದ್ದರೆ ಶಿರಸಿ ವಿಭಾಗದಲ್ಲಿ ಒಂದು ತಿಂಗಳಿನಲ್ಲಿ ಸರಾಸರಿ 60-70 ಟಿಸಿಗಳನ್ನು ಬದಲಾಯಿಸುವ ಸಂದರ್ಭವೂ ಬರುತ್ತದೆ. ಕೆಟ್ಟಿರುವ ಟಿಸಿಗಳನ್ನು ಶಿರಸಿಯ ದುರಸ್ತಿ ಕೇಂದ್ರದಲ್ಲಿ ಒಂದೆರಡು ದಿನಗಳಲ್ಲಿ ದುರಸ್ತಿಗೊಳಿಸಿ ಮತ್ತೆ ವಿದ್ಯುತ್ ಕಂಬಗಳಿಗೆ ಅಳವಡಿಸಲಾಗುತ್ತಿತ್ತು. ಆದರೆ ಈಗ ಹುಬ್ಬಳ್ಳಿಗೆ ಕಳುಹಿಸಿ ದುರಸ್ತಿಯಾಗಿ ಬರುವಷ್ಟರಲ್ಲಿ ಒಂದು ವಾರ ವಿಳಂಬವಾಗುತ್ತಿದೆ. ಇದರಿಂದ ಟಿಸಿಗಳ ಸಾಗಾಟಕ್ಕೆ ಅನಗತ್ಯ ವೆಚ್ಚವಾಗುವ ಜೊತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಕೈಕೊಟ್ಟ ವಿದ್ಯುತ್ ವಿತರಕ ದುರಸ್ತಿ ಮಾಡಿ ಮತ್ತೆ ಅಳವಡಿಸುವ ತನಕ ವಿದ್ಯುತ್ ಪೂರೈಕೆಗೂ ತೊಡಕಾಗುತ್ತಿದೆ.

`ಹಿಂದಿನ ಗುತ್ತಿಗೆ ಕಂಪೆನಿಯ ಅವಧಿ ಮೂರು ವರ್ಷಕ್ಕೆ ಮುಗಿದಿದ್ದು, ಹೊಸದಾಗಿ ಕರೆದಿದ್ದ ಟೆಂಡರ್‌ನಲ್ಲಿ ಕೆಲವರು ಮಾತ್ರ ಭಾಗವಹಿಸಿದ್ದರು. ಇದರಿಂದ ಕೇಂದ್ರ ಸ್ಥಗಿತಗೊಂಡಿದ್ದು, ಈಗ ಹಾವೇರಿ ಅನಿಲ ಎಂಜಿನಿಯರಿಂಗ್ಸ್ ಕಂಪೆನಿಯವರು ಸ್ಥಳ ಪರಿಶೀಲಿಸಿ ಹೋಗಿದ್ದಾರೆ. ಶೀಘ್ರದಲ್ಲಿ ಕೇಂದ್ರ ಪುನಃ ಪ್ರಾರಂಭವಾಗಬಹುದು. ಜಿಲ್ಲಾ ಉಸ್ತುವಾರಿ ಸಚಿವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಈ ವಿಷಯ ಚರ್ಚಿಸಿದ್ದಾರೆ' ಎನ್ನುತ್ತಾರೆ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಪಿ.ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.