ADVERTISEMENT

ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ ಕೆಳದರ್ಜೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 9:55 IST
Last Updated 8 ಮಾರ್ಚ್ 2011, 9:55 IST

ಕುಮಟಾ: ‘ಹಿಂದೆ ಪ್ರಾಥಮಿಕ ಆರೋಗ್ಯ ಘಟಕವಾಗಿದ್ದ ಕತಗಾಲ ಆಸ್ಪತ್ರೆ ಈಗ ಪ್ರಾಥಮಿಕ ಆರೋಗ್ಯ ಕೇಂದ್ರವೆಂದು ಬೋರ್ಡ್ ಬದಲಾಯಿಸಿಕೊಂಡು  ಮೇಲ್ದರ್ಜೆಗೇರಿದೆ. ಆದರೆ ಮೇಲ್ದರ್ಜೆಗೇರಿದ ಆಸ್ಪತ್ರೆಯಲ್ಲಿ  ಸೌಲಭ್ಯ ಮಾತ್ರ ಕೆಳದರ್ಜೆಯದೇ ಮುಂದುವರಿದೆ’ ಎಂದು ಸೋಮವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಳಕೋಡ ತಾ.ಪಂ. ಸದಸ್ಯ ಗಜಾನನ ಪೈ ಆರೋಪಿಸಿದರು.

‘ಕುಮಟಾ ಸರಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರಿಲ್ಲದ ಕಾರಣ ಪಕ್ಕದ ರೋಟರಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ನಾಯಿ ಕಡಿತದ ಚುಚ್ಚು ಮದ್ದಿನ ಕೊರತೆಯಿದ್ದು,  ಕಳೆದ ಡಿಸೆಂಬರ್‌ನಿಂದ ಈ ವರೆಗೆ ಆಸ್ಪತ್ರೆಗೆ 190 ಚುಚ್ಚು ಮದ್ದು ಮಾತ್ರ ಪೂರೈಕೆ  ಆಗಿದೆ. ತುರ್ತು ಸಂದರ್ಭವೊಂದರಲ್ಲಿ ರೋಗಿಗಳಿಗೆ ಹುಬ್ಬಳ್ಳಿಯಿಂದ ತರಿಸಿಕೊಡಲಾಗಿದೆ’ ಎಂದು ಸರಕಾರಿ ವೈದ್ಯ ಡಾ.ಡಿ.ಡಿ. ನಾಯಕ ತಿಳಿಸಿದರು.

‘ಪಶ್ಚಿಮ ಘಟ್ಟ ಯೋಜನೆಯಡಿ ದೇವಿಮನೆ ಹಾಗೂ ದೊಡ್ಡಮನೆ ಘಟ್ಟದಲ್ಲಿ ಸಿಮೆಂಟ್  ರಸ್ತೆ ನಿರ್ಮಾಣಕ್ಕೆ 14 ಕೋಟಿ ರೂ.  ಮಂಜೂರಾಗಿದ್ದು, ಸದ್ಯವೇ  ಟೆಂಡರ್ ಕರೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಆರ್. ನಾಯಕ  ಸಭೆಗೆ ತಿಳಿಸಿದರು. ಅಘನಾಶಿನಿಯಲ್ಲಿ ಸಂಪೂರ್ಣ ಕೆಟ್ಟು ಹೋಗಿರುವ ತಾರಿ ರಸ್ತೆ ದುರಸ್ತಿ ಮಾಡದಿರುವ ಬಗ್ಗೆ ಸದಸ್ಯರದ ರತ್ನಾಕರ ನಾಯ್ಕ ಹಾಗೂ ವೀಣಾ ಭಟ್ಟ ಗಮನ ಸೆಳೆದರು.

ಅರಣ್ಯ ಇಲಾಖೆ ಸರದಿಯಲ್ಲಿ ಸದಸ್ಯ ಗಜಾನನ ಪೈ ಹಗೂ ರತ್ನಾಕರ ನಾಯ್ಕ, ‘ ಎಲ್ಲೆಂದರಲ್ಲಿ ಇಲಾಖೆ ಕಾಂಡ್ಲಾ ಗಿಡಗಳನ್ನು ನೆಡುವ ಕಾರ್ಯ ಕೈಕೊಂಡಿದ್ದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದೆ ಪ್ರವಾಹ ಪತಿಸ್ಥಿತಿ ಉಂಟಾಗುತ್ತಿದೆ. ಗಜನಿ ಹಿನ್ನೀರು ಪ್ರದೇಶದಲ್ಲಿ ಹೂಳು ಹೆಚ್ಚಾಗಿದೆ. ನದಿ ಕೊರೆದು ಹೋಗುವ ಪ್ರದೇಶದಲ್ಲಿ ಮಾತ್ರ ಇದನ್ನು ಬೆಳೆಸುವಂತಾಗಬೇಕು’ ಎಂದರು.

‘ಈಗ ನಿತ್ಯ ಆರು ತಾಸು ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಆದರೆ ಅದಕ್ಕೆ ಸಮಯ ನಿಗದಿ ಮಾಡಿಲ್ಲ’ ಎಂದು ಕೆ.ಪಿ.ಟಿ.ಸಿ.ಎಲ್. ಅಧಿಕಾರಿ ತಿಳಿಸಿದರು.  ‘ಹೊಲನಗದ್ದೆಯಲ್ಲಿ ಸಿಗಡಿ ಹ್ಯಾಚರಿಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು  ಹಿಂದೆ ಅಳವಡಿಸಿದ್ದ 11 ಕೆ.ವಿ. ಸಾಮರ್ಥ್ಯದ ಲೈನ್ ಜನರ ಕೈಗೆ ತಗಲುವಷ್ಟು ಅಪಾಯ ಸ್ಥಿತಿಯಲ್ಲಿದೆ. ಅದನ್ನು ಬದಲಾಯಿಸುವ ಬಗ್ಗೆ ಸ್ಥಳೀಯ ಪಂಚಾಯಲ್ಲಿ ನಿರ್ಣಯ ಕೈಕೊಂಡು ಪತ್ರ ಬರೆದರೂ ಕೆ.ಪಿ.ಟಿ.ಸಿ.ಎಲ್. ಸ್ಪಂದಿಸುತ್ತಿಲ್ಲ’ ಎಂದು ವೀಣಾ ಭಟ್ಟ ಆರೋಪಿಸಿದರು.

‘ ಮಳೆ ಹಾಗೂ ರೋಗಗಳಿಂದ ಹಾನಿಗೀಡಾದ ಭತ್ತದ ಬೆಳೆಗೆ ಪರಿಹಾರ ನೀಡದಿದ್ದರೆ ಹಾನಿಯ ಬಗ್ಗೆ ಅಧಿಕಾರಿಗಳು ಸಮೀಕ್ಷೆ ಮಾಡುವುದಾದರೂ ಏಕೆ’ ಎಂದು ರತ್ನಾಕರ ನಾಯ್ಕ ಕೃಷಿ ಅಧಿಕಾರಿಗಳನ್ನು ಪ್ರಶ್ನಿಸಿದರು.ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಮೇಟಿ, ತಾ.ಪಂ. ಅಧ್ಯಕ್ಷೆ ನೀಲಾಂಬಿಕಾ ನಾಯ್ಕ, ಉಪಾಧ್ಯಕ್ಷ ಈಶ್ವರ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT