ADVERTISEMENT

‘ಯಾವ ಧರ್ಮವೂ ಗೋ ಹತ್ಯೆ ಹೇಳಿಲ್ಲ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 8:09 IST
Last Updated 21 ಜನವರಿ 2017, 8:09 IST
‘ಯಾವ  ಧರ್ಮವೂ  ಗೋ  ಹತ್ಯೆ  ಹೇಳಿಲ್ಲ’
‘ಯಾವ ಧರ್ಮವೂ ಗೋ ಹತ್ಯೆ ಹೇಳಿಲ್ಲ’   

ಭಟ್ಕಳ:  ಯಾವ ಧರ್ಮದಲ್ಲೂ ಗೋಹತ್ಯೆ ಮಾಡಿ ಎಂದು ಹೇಳಿಲ್ಲ  ಎಂದು ಹೇಳಿದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಭಾರತೀಯ ಗೋವಿನ ತಳಿ ವಿಶಿಷ್ಟವಾಗಿದ್ದು ಇದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ತಾಲ್ಲೂಕಿನ ಶಿರಾಲಿ ಜನತಾ ವಿದ್ಯಾಲಯದ ಮೈದಾನದಲ್ಲಿ ಮಂಗಲ ಗೋಯಾತ್ರೆ ಹಾಗೂ ಸುರಭಿ ಸಂತ ಸಮಾಗಮ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಗೋವುಗಳೇ ಮಾರಾಟಕ್ಕೆ ದೊರಕದಿದ್ದ ಮೇಲೆ ಅವುಗಳನ್ನು ಹತ್ಯೆ ಮಾಡುವುದಾದೂ ಹೇಗೆ ಎಂದ ಅವರು, ಮನೆಯಲ್ಲಿ ಗೋವುಗಳನ್ನು ಸಾಕಲು ಆಗದೇ ಇದ್ದವರು ಗೋಶಾಲೆಗಳಲ್ಲಿ ಒಂದು ಗೋವನ್ನು ದತ್ತು ತೆಗೆದುಕೊಳ್ಳುವ ಕಾರ್ಯ ಮಾಡಬೇಕು.

ಇದರಿಂದ ಗೋವುಗಳ ರಕ್ಷಣೆ ಮಾಡಿದಂತಾಗುತ್ತದೆ ಎಂದರು. ನಂತರ ಸಭೆಯಲ್ಲಿ ಸ್ವಾಮೀಜಿ ಗೋರಕ್ಷಕರಿಗೆ ಗೋದೀಕ್ಷೆ ನೀಡಿದರು. ಸರ್ಕಾರ ಗೋಮಾಳ ಪರಭಾರೆ ಮಾಡಲು ಹೊರಟಿರುವುದನ್ನು ಖಂಡಿಸುತ್ತದೆ ಎಂದರು. ರಾಘವೇಂದ್ರ ಭಾರತೀ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕಿ ಶ್ರೀದೇವಿ ಸುರೇಶ ಭಟ್‌. ಗೋವು ಸಾಕಾಣಿಕೆಯಿಂದ ಹಾಗು ಗವ್ಯೋತ್ಪ ನ್ನಗಳಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಪ್ರಮುಖರಾದ ವೆಂಕಟೇಶ ನಾಯ್ಕ, ಸುನೀಲ್‌ ನಾಯ್ಕ, ಈಶ್ವರ ಎನ್‌. ನಾಯ್ಕ, ವೆಂಕಟೇಶ ಪ್ರಭು, ಡಿ. ಜೆ ಕಾಮತ್‌, ಶೇಷಗಿರಿ ಭಟ್‌ ಮುಂತಾದವರು ಉಪಸ್ಥಿತರಿದ್ದರು.
ಮಂಗಲ ಗೋಯಾತ್ರೆ ಸಂಚಾಲಕ ನೀಲಕಂಠ ಯಾಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಭೆಗೂ ಮುನ್ನ ಶಿರಾಲಿಯ ದೇವಾಲಿ ದೇವಸ್ಥಾನದಿಂದ ಜನತಾ ವಿದ್ಯಾಲಯದವರೆಗೆ ಶೋಭಾಯಾತ್ರೆ ನಡೆಯಿತು. ಹಾಗೂ ಸ್ವಾಮೀಜಿ ಮತ್ತು ಮಂಗಲ ಗೋಯಾತ್ರೆಯನ್ನು ಪೂರ್ಣ ಕುಂಭದೊಂದಿಗೆ  ಸ್ವಾಗತಿಸಲಾಯಿತು.

ಕಡವಿನಕಟ್ಟೆಯಲ್ಲಿ ರೈತರೊಂದಿಗೆ ಸಂವಾದ: ಇಲ್ಲಿನ ಕಡವಿನಕಟ್ಟೆ ದುರ್ಗಾಪರಮೇಶ್ವರ ಸಭಾಭವನದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಶುಕ್ರವಾರ ರೈತರು ಹಾಗೂ ಗೋ ಪ್ರೇಮಿಗಳೊಂದಿಗೆ ಸಂವಾದ ನಡೆಸಿದರು.

ಗೋವು ಸಾಕಲು ಆಗದೇ ಇದ್ದವರು ಗೋಶಾಲೆಗಳಲ್ಲಿ ಗೋವು ದತ್ತು ತೆಗೆದುಕೊಳ್ಳುವ ಮೂಲಕ ಗೋ ರಕ್ಷಣಗೆ ಮುಂದಾಗುವಂತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.