ADVERTISEMENT

ರಿಯಾಜ್ ಹತ್ಯೆ: ಬಿಸಿಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 11:20 IST
Last Updated 13 ಜನವರಿ 2011, 11:20 IST

ಭಟ್ಕಳ: ದೇಶದ ವಿವಿಧೆಡೆ ನಡೆದ ಹಲವು ಸ್ಫೋಟ ಪ್ರಕರಣಗಳ ಪ್ರಮುಖ ರೂವಾರಿ ಎನ್ನಲಾಗಿದ್ದ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಯ ರಿಯಾಜ್ ಭಟ್ಕಳ ಅವನನ್ನು ಹತ್ಯೆ ಮಾಡಲಾಗಿದೆ ಎನ್ನುವ ಸುದ್ದಿ ಹಿಂದಿ ಸುದ್ದಿವಾಹಿನಿಯಲ್ಲಿ ಬಿತ್ತರವಾಗಿರುವ ವಿಷಯ ತಾಲ್ಲೂಕಿನಾದ್ಯಂತ ಬುಧವಾರ ಬಹು ಚರ್ಚೆಯ ವಿಷಯವಾಗಿತ್ತು.

ರಿಯಾಜ್ ಭಟ್ಕಳ ಹತ್ಯೆ ಆಗಿರುವ ಬಗ್ಗೆ ಪೊಲೀಸ್ ಇಲಾಖೆಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಇಲ್ಲ. ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಮುಂಬೈ ಪೊಲೀಸರು ಭಟ್ಕಳಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಿಯಾಜ್ ಭಟ್ಕಳನನ್ನು ಹತ್ಯೆ ಮಾಡಲಾಗಿದೆ ಎಂದು ಚೊಟಾ ರಾಜನ್ ಗುಂಪಿನವರು ಸುದ್ದಿ ವಾಹಿನಿಗೆ ನೀಡಿರುವ ಹೇಳಿಕೆಯ ಬಗ್ಗೆ ಜನರು ಗುಂಪುಗುಂಪಾಗಿ ಚರ್ಚಿಸುತ್ತಿರುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು. ಈ ವಿಷಯ ಖಚಿತ ಪಡಿಸಿಕೊಳ್ಳಲು ಸ್ಥಳೀಯ ಪೊಲೀಸರು ನಗರದ ತೆಂಗಿನಗುಂಡಿ ಕ್ರಾಸ್‌ನಲ್ಲಿರುವ ರಿಯಾಜ್ ಭಟ್ಕಳ ಮನೆಗೆ ತೆರಳಿ ಅವರ ಪಾಲಕರನ್ನು ವಿಚಾರಿಸಿದ್ದು ‘ರಿಯಾಜ್ ಹತ್ಯೆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ದೃಶ್ಯ ಮಾಧ್ಯಮವೊಂದರಲ್ಲಿ ಬಂದ ಸುದ್ದಿಯನ್ನು ಕೇಳಿದ್ದೇವೆ. ಆತ ಮನೆ ಬಿಟ್ಟು ಆರು ವರ್ಷಗಳೇ ಕಳೆದಿದೆ’ ಎಂದು ತಿಳಿಸಿದ್ದಾರೆ.

ಮುಂಬೈನಲ್ಲಿ ರೈಲು, ಪುಣೆಯಲ್ಲಿ ಜರ್ಮನ್ ಬೇಕರಿ ಹಾಗೂ ಬೆಂಗಳೂರಿನಲ್ಲಿ ನಡೆದ ಸ್ಫೋಟ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳ ಪ್ರಮುಖ ರೂವಾರಿಗಳು ಎನ್ನಲಾದ ರಿಯಾಜ್ ಭಟ್ಕಳ ಹಾಗೂ ಈತನ ಸಹೋದರ ಇಕ್ಬಾಲ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ರಿಯಾಜ್ ಹತ್ಯೆ ಸುದ್ದಿ ಸಾಕಷ್ಟು ಗೊಂದಲ ಸೃಷ್ಟಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.