ADVERTISEMENT

ಸಂಭ್ರಮದೊಂದಿಗೆ ಹಾನಿಯನ್ನೂ ಸುರಿದ ಮಳೆ

ಕಾರವಾರದಲ್ಲಿ ಭಾನುವಾರ ರಾತ್ರಿ ಸಿಡಿಲು, ರಭಸದ ಗಾಳಿಯ ಅಬ್ಬರ; ತಂಪಾದ ವಾತಾವರಣ

​ಪ್ರಜಾವಾಣಿ ವಾರ್ತೆ
Published 29 ಮೇ 2018, 13:20 IST
Last Updated 29 ಮೇ 2018, 13:20 IST
ನಗರದ ಭದ್ರಾ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಕೆಳಗಿನ ಮಣ್ಣು ಕೊಚ್ಚಿ ಹೋಗಿದೆ
ನಗರದ ಭದ್ರಾ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಕೆಳಗಿನ ಮಣ್ಣು ಕೊಚ್ಚಿ ಹೋಗಿದೆ   

ಕಾರವಾರ: ನಗರದಲ್ಲಿ ಸೋಮವಾರ ಸಂಜೆ ಮತ್ತು ಭಾನುವಾರ ರಾತ್ರಿ ಸುರಿದ ರಭಸದ ಗಾಳಿ, ಸಿಡಿಲು ಸಹಿತ ಭಾರಿ ಮಳೆಯಿಂದ ವಾತಾವರಣ ತಂಪಾಗಿದೆ. ಸೆಕೆಯಿಂದ ಕಂಗೆಟ್ಟಿದ್ದ ನಾಗರಿಕರಿಗೆ ನೆಮ್ಮದಿ ತಂದಿದೆ. ಆದರೆ, ನೆಮ್ಮದಿ ಜತೆಗೆ ವಿವಿಧೆಡೆ ಮರಗಳು ಬಿದ್ದು ಮನೆಗಳಿಗೆ ಮತ್ತು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ.

ನಗರದ ನಂದನಗದ್ದಾ ಸಮೀಪದ ವಾರ್ಡ್ ಸಂಖ್ಯೆ 21ರ ಅಂಬೇಡ್ಕರ್ ಕಾಲೊನಿಯಲ್ಲಿ ದೀಪಕ್ ಹುಲೇಸ್ವಾರ್ ಎಂಬುವವರ ಮನೆಯ ಮೇಲೆ ತೆಂಗಿನಮರವೊಂದು ಬಿದ್ದಿದೆ. ನೂರಾರು ಹೆಂಚುಗಳು ಒಡೆದಿದ್ದು, ಚಾವಣಿಯ ಅಡ್ಡಪಟ್ಟಿಗಳು ಮುರಿದಿವೆ. ಸಂಜೆ 7.30ರ ಸುಮಾರಿಗೆ ಅವಘಡವಾಗಿದ್ದು, ಮನೆಯೊಳಗೆ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮನೆಯಲ್ಲಿದ್ದ ಫ್ಯಾನ್ ಮತ್ತು ವಿದ್ಯುತ್ ದೀಪಗಳಿಗೂ ಹಾನಿಯಾಗಿದೆ. ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿ, ನಷ್ಟದ ಅಂದಾಜು ಮಾಡಿದರು.

ADVERTISEMENT

ಇದೇ ಕಾಲೊನಿಯಲ್ಲಿ ಬೃಹತ್ ಮಾವಿನ ಮರದ ದೊಡ್ಡ ಕೊಂಬೆಗಳು ಎರಡು ಮನೆಗಳ ಮೇಲೆ ಬಿದ್ದಿವೆ. ಗೋಪಾಲ ರಾಮಚಂದ್ರ ಸಾವಂತ್ ಹಾಗೂ ನೀಲೇಶ್ ಎಂಬುವವರ ಮನೆಗಳ ನೂರಾರು ಹೆಂಚುಗಳು ಒಡೆದಿವೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಮತ್ತೊಂದು ರಸ್ತೆಯಲ್ಲಿ ಮಾವಿನ ಮರದ ಕೊಂಬೆ ಮುರಿದು ರಸ್ತೆಗೆ ಬಿದ್ದಿತ್ತು. ಇದರಿಂದ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಸ್ಥಳೀಯರು ಮತ್ತು ನಗರಸಭೆ ಕಾರ್ಮಿಕರು ತೆರವುಗೊಳಿಸಿದರು.

ಈ ಭಾಗದಲ್ಲಿ ವಿದ್ಯುತ್ ತಂತಿಗಳೂ ತುಂಡಾಗಿದ್ದು, ಇಡೀ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸುಮಾರು ಒಂದೂವರೆ ತಾಸು ರಭಸವಾಗಿ ಸುರಿದ ಮಳೆಯೊಂದಿಗೆ ಕಣ್ಣು ಕೋರೈಸುವ ಮಿಂಚು ಮತ್ತು ಸಿಡಿಲು ಕೂಡ ಮುಂಗಾರಿನ ಮುನ್ಸೂಚನೆ ನೀಡಿತು.

ದೂರ ಸರಿದ ರಸ್ತೆಯಂಚು

ನಗರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಭದ್ರಾ ಹೋಟೆಲ್ ಬಳಿ ಅಂತರ  ಕಾಣಿಸಿಕೊಂಡಿದ್ದು, ಸಿಮೆಂಟ್ ಇಟ್ಟಿಗೆಯ ಕೆಳಭಾಗದಲ್ಲಿ ಹಾಕಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ. ತಡೆಗೋಡೆಯು ರಸ್ತೆಯಿಂದ 4–5 ಇಂಚುಗಳಷ್ಟು ದೂರ ಸರಿದಿದೆ. ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಕೇವಲ ಕಲ್ಲು, ಮಣ್ಣು ಹಾಕಲಾಗಿದೆ. ಕಳಪೆ ಕಾಮಗಾರಿಯಿಂದ ಒಂದೇ ಮಳೆಗೆ ರಸ್ತೆಯ ಕೆಳಭಾಗ ಕೊಚ್ಚಿಕೊಂಡು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಐಡಿಯಲ್ ರೋಡ್ ಬಿಲ್ಡರ್ಸ್ ಸಂಸ್ಥೆಯ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದು, ದುರಸ್ತಿ ಮಾಡುವುದಾಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮನೆ ಮೇಲೆ ಬಿದ್ದ ಮರ

ನಗರದ ಅಂಬೇಡ್ಕರ್ ಕಾಲೊನಿಯಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದಿದ್ದು, ಹೆಂಚುಗಳು ಪುಡಿಯಾಗಿವೆ. ಸಮೀಪದ ರಸ್ತೆಯ ಮಾವಿನಮರದ ಕೊಂಬೆಗಳು ಎರಡು ಮನೆಗಳ ಮೇಲೆ ಬಿದ್ದಿದ್ದು, ಸಾವಿರಾರು ರೂಪಾಯಿ ಹಾನಿಯಾಗಿದೆ. ಶಿರಸಿ, ಅಂಕೋಲಾ, ಭಟ್ಕಳ ಭಾಗದಲ್ಲೂ ಸ್ವಲ್ಪ ಹೊತ್ತು ಮಳೆಯಾಗಿದ್ದು, ಹಾನಿಯಾಗಿಲ್ಲ.

ಕಾರವಾರದಲ್ಲಿ 33.6 ಮಿ.ಮೀ ಮಳೆ

ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಕಾರವಾರದಲ್ಲಿ 33.6 ಮಿ.ಮೀ.ನಷ್ಟು ಸುರಿದಿದೆ. ಭಟ್ಕಳದಲ್ಲಿ 19.4, ಹಳಿಯಾಳದಲ್ಲಿ 10.2, ಅಂಕೋಲಾದಲ್ಲಿ 9, ಶಿರಸಿಯಲ್ಲಿ 8.5, ಮುಂಡಗೋಡಿನಲ್ಲಿ 7.6, ಜೊಯಿಡಾದಲ್ಲಿ 5.4, ಯಲ್ಲಾಪುರದಲ್ಲಿ 2, ಸಿದ್ದಾಪುರದಲ್ಲಿ 1.4, ಕುಮಟಾದಲ್ಲಿ 0.9, ಹೊನ್ನಾವರದಲ್ಲಿ 0.6 ಮಿಮೀ ಮಳೆಯಾಗಿದೆ.

ಸಿಡಿಲು: ಯುವತಿಗೆ ಗಾಯ

ಯಲ್ಲಾಪುರ: ತಾಲ್ಲೂಕಿನ ಜೋಗಿಕೊಪ್ಪದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಸೋನಿ ಜಾನು ಪಟಕಾರೆ (27) ಎಂಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಮನೆಯ ಅಂಗಳದಲ್ಲಿದ್ದಾಗ ಸಿಡಿಲು ಬಡಿದಿದೆ. ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಯಲ್ಲಾಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎತ್ತು ಸಾವು; ಕೊಟ್ಟಿಗೆ ನೆಲಸಮ

ಹಳಿಯಾಳ: ತಾಲ್ಲೂಕಿನ ಹಲಸಿ ಗ್ರಾಮದ ಪಟ್ಟಣದ ನಾರಾಯಣ ಹೂವಪ್ಪ ಮೆಲಗಿ ಅವರ ಕೊಟ್ಟಿಗೆಯಲ್ಲಿದ್ದ ಎರಡು ಎತ್ತುಗಳು ಭಾನುವಾರ ಸಿಡಿಲು ಬಡಿದು ಮೃತಪಟ್ಟಿವೆ. ‌ಸಿಡಿಲಿನ ರಭಸಕ್ಕೆ ಇಡೀ ಕೊಟ್ಟಿಗೆ ಕುಸಿದು ಬಿದ್ದಿದ್ದು, ಅಂದಾಜು ₹ 2 ಲಕ್ಷ ಹಾನಿಯಾಗಿದೆ ಎಂದು ನಾರಾಯಣ ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಕಂದಾಯ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.