ADVERTISEMENT

ಸಡಿಲಗೊಳ್ಳುತ್ತಿರುವ ಮನುಷ್ಯ ಸಂಬಂಧ: ವಿಷಾದ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2011, 8:45 IST
Last Updated 14 ನವೆಂಬರ್ 2011, 8:45 IST
ಸಡಿಲಗೊಳ್ಳುತ್ತಿರುವ ಮನುಷ್ಯ ಸಂಬಂಧ: ವಿಷಾದ
ಸಡಿಲಗೊಳ್ಳುತ್ತಿರುವ ಮನುಷ್ಯ ಸಂಬಂಧ: ವಿಷಾದ   

ಸಿದ್ದಾಪುರ: `ಶತಮಾನೋತ್ಸವ ಎಂದರೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸಂದರ್ಭವಾಗಿದೆ~ ಎಂದು ಸಾಹಿತಿ ಡಾ.ಎಚ್.ಎಸ್.ಮೋಹನ ನುಡಿದರು.

ತಾಲ್ಲೂಕಿನ ಕೋಲಸಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ  ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವಿಚಿತ್ರ ಮತ್ತು ವಿಸ್ಮಯದ ಕಾಲಘಟ್ಟದಲ್ಲಿರುವ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ನಮಗೆ ಬೇಕಾದ ಆದರ್ಶ ಸ್ಥಳೀಯವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಮತ್ತು ಪ್ರತಿಕ್ಷಣ ಮನುಷ್ಯ ಸಂಬಂಧಗಳು ಸಡಿಲಗೊಳ್ಳುತ್ತಿವೆ. ನಮ್ಮಳಗಿನ ಜ್ಞಾನದ ಅರಿವನ್ನು ನಾವು ಮಾಡಿಕೊಳ್ಳುತ್ತಿಲ್ಲ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಬರಹಗಾರ ಡಾ.ವಿಠ್ಠಲ ಭಂಡಾರಿ ಮಾತನಾಡಿ, ಹಿಂದೆ ಶಿಕ್ಷಕರು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಈಗ ಶಾಲೆ ಮತ್ತು ಶಿಕ್ಷಕರ ನಡುವಿನ ಸಂಬಂಧ ಕೇವಲ ಸಂಬಳಕ್ಕಾಗಿ ಎನ್ನುವಂತಾಗಿದೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಜುಕ್ತಿಮಠ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ಸೋಮಶೇಖರ,ಎಪಿಎಂಸಿ ಸದಸ್ಯ ವಾಸುದೇವ ನಾಯ್ಕ,ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಆರ್.ವಿನಾಯಕ ಮಾತನಾಡಿದರು. ಶತಮಾನೋತ್ಸವ ಆಚರಣಾ ಸಮಿತಿಯ ಗೌರವಾಧ್ಯಕ್ಷ ಜಯಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ: ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮೋಹನ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.  ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ ಸ್ವಾಗತಿಸಿದರು.ಭಾಸ್ಕರ ನಾಯ್ಕ ಮತ್ತು ಲೋಕೇಶ ನಾಯ್ಕ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.