ADVERTISEMENT

ಸೀಬರ್ಡ್‌ ನೌಕಾನೆಲೆ ವೀಕ್ಷಿಸಿದ ಶಾಸಕರು, ಸಚಿವರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:22 IST
Last Updated 19 ನವೆಂಬರ್ 2017, 6:22 IST

ಕಾರವಾರ: ರಾಜ್ಯದ 150ಕ್ಕೂ ಹೆಚ್ಚು ಶಾಸಕರು ಇಲ್ಲಿನ ಸೀಬರ್ಡ್‌ ನೌಕಾನೆಲೆಗೆ ಶನಿವಾರ ಭೇಟಿ ನೀಡಿ, ಯುದ್ಧ ನೌಕೆಗಳು ಹಾಗೂ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು.

ಯುದ್ಧ ನೌಕೆಗಳಿಗೆ ಇಂಧನ ಸರಬರಾಜು ಮಾಡುವ ಐಎನ್‌ಎಸ್‌ ಆದಿತ್ಯ ನೌಕೆಯಲ್ಲಿ ವಿಹರಿಸಿದ ಅವರು, ಅದರ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಂಡರು. ವಿಮಾನ ವಾಹಕ ಬೃಹತ್‌ ಯುದ್ಧ ನೌಕೆಯಾದ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಕಣ್ತುಂಬಿಕೊಂಡರು. ನೌಕಾನೆಲೆಯ ಆಡಳಿತ ಕಚೇರಿ, ಯುದ್ಧ ನೌಕೆಗಳ ದುರಸ್ತಿ ಮಾಡುವ ಡಾಕ್ ಯಾರ್ಡ್ ವೀಕ್ಷಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿದ್ದ ಶಾಸಕರಿಗೆ ಸಚಿವಾಲಯವೇ ಈ ಪ್ರವಾಸ ಆಯೋಜಿಸಿತ್ತು. 4 ಐರಾವತ ಬಸ್‌ಗಳಲ್ಲಿ ಸಚಿವರು, ಶಾಸಕರು ಬಂದಿದ್ದರು.

ADVERTISEMENT

ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಎಚ್‌.ಆಂಜನೇಯ, ಉಮಾಶ್ರಿ ಇದ್ದರು. ಕೆಲವರು ಕುಟುಂಬ ಸದಸ್ಯರನ್ನೂ ಕರೆತಂದಿದ್ದರು. ಸ್ವಂತ ಕಾರುಗಳಲ್ಲಿಯೂ ಕೆಲವರು ಬಂದಿದ್ದರು.

‘ಸೀಬರ್ಡ್ ಯೋಜನೆಯನ್ನು ವೀಕ್ಷಿಸುವಂತೆ ಪ್ರಧಾನಿಯೇ ಪತ್ರ ಬರೆದಿದ್ದರು. ಹೀಗಾಗಿ ಶಾಸಕರ ಜತೆ ಇಲ್ಲಿಗೆ ಬಂದಿದ್ದೇವೆ’ ಎಂದು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

‘ನೌಕಾನೆಲೆ ಶಾಸಕರಿಗೆ ಹೊಸದು. ದೇಶದ ಜಲಗಡಿಯ ರಕ್ಷಣೆಯ ಮಾಹಿತಿ ಶಾಸಕರಿಗೆ ಆಗಬೇಕೆಂದು ಬೆಳಗಾವಿ ಅಧಿವೇಶನದ ಬಿಡುವಿನ ವೇಳೆ ಬಂದಿದ್ದೇವೆ. ಇದು ಸಂತೋಷ ಮತ್ತು ಹೆಮ್ಮೆಯ ಕ್ಷಣ’ ಎಂದು ಸ್ಪೀಕರ್‌ ಕೆ.ಬಿ.ಕೋಳಿವಾಡ ತಿಳಿಸಿದರು.

* *

ಸೀಬರ್ಡ್‌ ನಿರಾಶ್ರಿತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಒತ್ತಾಯಿಸಲಾಗುವುದು.
ಕೆ.ಬಿ.ಕೋಳಿವಾಡ, ಸ್ಪೀಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.