ADVERTISEMENT

‘ಜನ ಜನನಿ’ ಗೋ ಕಥೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:32 IST
Last Updated 14 ಡಿಸೆಂಬರ್ 2013, 5:32 IST

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಇಲ್ಲಿಯ ಮಹಾತ್ಮಾಗಾಂಧಿ ಮೈದಾನ ದಲ್ಲಿ ಇದೇ 15ರಿಂದ 19 ವರೆಗೆ ನಡೆಯುವ ‘ಜನ ಜನನಿ’ ಗೋ ಕಥಾ ಕಾರ್ಯಕ್ರಮ 50 ವರ್ಷಗಳಿಂದ ನಾವು ಕಳೆದುಕೊಂಡಿರುವ ಗೋ, ಗ್ರಾಮ ಜೀವನ ಹಾಗೂ ಕೃಷಿಯನ್ನು ಪುನ: ಪಡೆಯುವ ಚಿಂತನೆ ಹಾಗೂ ಪ್ರಯತ್ನವಾಗಿದೆ ಎಂದು ಕಾರ್ಯಕ್ರಮದ ಜಿಲ್ಲಾ ಕಾರ್ಯಾಧ್ಯಕ್ಷ ಮುರಳೀಧರ ಪ್ರಭು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನ ಜನನಿ’ ಕಾರ್ಯಕ್ರಮ ನಿಮಿತ್ತ ಕರಾವಳಿ ತಾಲ್ಲೂಕುಗಳಲ್ಲಿ ಸುಮಾರು 25 ಸಾವಿರ ಮನೆಗಳನ್ನು ತಲುಪಲಾಗಿದೆ. ಗೋವಿನ ಮಹತ್ವ ಮನದಟ್ಟ ಮಾಡುವ ಗೋ ಕಥೆ ನಿತ್ಯ ಸಂಜೆ 6ರಿಂದ 9 ರ ವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ನಿತ್ಯ 15–20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. 32ಕ್ಕೂ ಹೆಚ್ಚು ತಳಿಗಳ ಗೋವುಗಳನ್ನು ಪ್ರದರ್ಶಿಸಲಾಗುವುದು ಎಂದರು.

ಮಳಿಗೆಗಳ ನಿರ್ವಹಣಾ ಸಮಿತಿಯ ರವೀಂದ್ರ ಭಟ್ಟ ಸೂರಿ ಅವರು ಮಾತನಾಡಿ, ‘ಪ್ರದರ್ಶನದಲ್ಲಿ ಒಟ್ಟು 150 ಮಳಿಗೆಗಳು ಇರಲಿವೆ ಎಂದರು.

ಗೋ ತುಲಾಭಾರಕ್ಕೆ ಕಾರ್ಯಕ್ರಮ ದಲ್ಲಿ ಅವಕಾಶ ಕಲ್ಪಿಸಲಾಗುವುದು. ಹಳ್ಳಿ ಗಳಿಂದ ಬರುವ ಜನರಿಗೆ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ವಿನಾಯಕ ಭಟ್ಟ,  ವಿ.ಎಸ್‌. ಹೆಗಡೆ ಮಾಹಿತಿ ನೀಡಿದರು. 15ರಂದು ಸಂಜೆ 5 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಉದ್ಘಾಟಿಸುವರು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಚಾರ ಸಮಿತಿಯ ಅರುಣ ಹೆಗಡೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಈಶ್ವರ ಭಟ್ಟ, ಟಿ ವಿ ಹೆಗಡೆ,  ವಸಂತ ರಾವ್‌,  ಬಿಎನ್ಕೆ ನಾಗರಾಜ ಹಾಗೂ ಜಿ ಜಿ ಭಟ್ಟ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.