ADVERTISEMENT

‘ಹೊನ್ನಾವರದ ಭೂಸ್ವಾಧೀನ ಕಚೇರಿ ಮುತ್ತಿಗೆ 25ಕ್ಕೆ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:20 IST
Last Updated 20 ಸೆಪ್ಟೆಂಬರ್ 2013, 8:20 IST

ಕಾರವಾರ:‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಕಾನೂನು ಬಾಹಿರ ಕೆಲಸಗಳು ಮುಂದುವರಿದ್ದಲ್ಲಿ ಸೆ. 25ರಂದು ಕಚೇರಿ ಮುತ್ತಿಗೆ ಹಾಗೂ ಶಾಂತಿ ರೀತಿಯ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವುದು’ ಎಂದು ಉತ್ತರ ಕನ್ನಡ ಜಿಲ್ಲಾ ಅವೈಜ್ಞಾನಿಕ ಹೆದ್ದಾರಿ ಅಗಲೀಕರಣ ವಿರೋಧಿ ಸಮಿತಿ ಸದಸ್ಯರು ಗುರುವಾರ ಎಚ್ಚರಿಸಿದರು.

‘ಹೆದ್ದಾರಿ ವಿಸ್ತರಣೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂತ್ರಸ್ತರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಬೇಕು. ಅಲ್ಲಿವರೆಗೆ ದೂರು ವಿಚಾರಣೆ ಪ್ರಕ್ರಿಯೆ ಯನ್ನು ನಡೆಸ ಬಾರದು’ ಎಂದು ಒತ್ತಾಯಿಸಿ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿಯ ಭೂಸ್ವಾಧೀನ ಅಧಿಕಾರಿ ಆರ್‌. ವೆಂಕಟೇಶ್‌ ಅವರಿಗೆ ಮನವಿ ಸಲ್ಲಿಸಿದರು. 

ಸಮಿತಿ ಅಧ್ಯಕ್ಷ ಕೆ.ಆರ್‌. ದೇಸಾಯಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ–66 ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಜಿ.ಎನ್‌. ಬಸವರಾಜ್‌ ಅವರ ಮೇಲಿನ ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಬಾರದು’ ಎಂದರು.

‘ಎಲ್‌.ಎಸ್‌. ಹೆಗಡೆ ಎನ್ನುವರು ಪ್ರಭಾರ ವಿಶೇಷ ಭೂಸ್ವಾಧೀನಾಧಿಕಾರಿ ಹೇಳಿಕೊಂಡು ಸೆ. 17 ಮತ್ತು ಸೆ. 18ರಂದು ವಿಚಾರಣೆಗೆ ಬಂದಿದ್ದ ಜನರಿಗೆ ಸೆ. 25 ಮತ್ತು 26ರಂದು ವಿಚಾರಣೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಈ ಕ್ರಮವನ್ನು ವಿರೋಧಿ ಸಿದವರಿಗೆ ಪೊಲೀಸರಿಗೆ ದೂರು ಕೊಟ್ಟು ಬಂಧಿಸುವುದಾಗಿಯೂ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಭೂಸ್ವಾಧೀನ ಕಚೇರಿ ಮೇಲೆ ನಮಗೆ ವಿಶ್ವಾಸವಿಲ್ಲ’ ಎಂದರು.

ಸಮಿತಿ ಮುಖಂಡರಾದ ಮಾಧವ ನಾಯಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.