ADVERTISEMENT

123 ಅಕ್ಕಿ ಗಿರಣಿಗಳ ಸದ್ದು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:38 IST
Last Updated 17 ಡಿಸೆಂಬರ್ 2013, 6:38 IST

ಶಿರಸಿ: ಅಕ್ಕಿ ಗಿರಣಿ ಮಾಲೀಕರಿಂದ ಅವೈಜ್ಞಾನಿಕ ಲೆವಿ ಆಕರಣೆ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಅಕ್ಕಿ ಗಿರಣಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಬಂದ್‌ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲ 123 ಅಕ್ಕಿ ಗಿರಣಿಗಳು ಸೋಮವಾರ ದಿಂದ ಕಾರ್ಯ ಸ್ಥಗಿತಗೊಳಿಸಿವೆ.

ಅಕ್ಕಿ ಗಿರಣಿಗಳಲ್ಲಿ ಬಾಗಿಲು ಮುಚ್ಚಿರುವುದ ರಿಂದ ಅಕ್ಕಿ ಮಾಡಿಸಲು ಬಂದಿದ್ದ ಗ್ರಾಮೀಣ ಭಾಗದ ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಜಿಲ್ಲೆಯ ಗಿರಣಿಗಳಿಂದ ಪ್ರತಿದಿನಕ್ಕೆ ಸರಾಸರಿ 110 ಟನ್‌ ಅಕ್ಕಿ ಉತ್ಪಾದನೆ ಯಾಗುತ್ತಿದ್ದು, ಎಲ್ಲ ಗಿರಣಿಗಳು ಬಂದಾಗಿದ್ದರಿಂದ ಮಾರುಕಟ್ಟೆಗೆ ಅಕ್ಕಿ ಪೂರೈಕೆ ನಿಂತಿದೆ.

‘ರಾಜ್ಯ ಸರ್ಕಾರ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲ.ಸರ್ಕಾರದ ಭತ್ತದ ದರಕ್ಕೆ ತಕ್ಕಂತೆ ಅಕ್ಕಿ ಮಾಡಿದರೆ ಒಂದು ಲೋಡ್‌ಗೆ ಕನಿಷ್ಠ ₨ 20ಸಾವಿರದಷ್ಟು ನಷ್ಟವಾಗುತ್ತದೆ. ಗಿರಣಿ ಬಂದಾಗಿದ್ದರಿಂದ ಮಾರುಕಟ್ಟೆಗೆ ಅಕ್ಕಿ ಪೂರೈಕೆಯಾಗುತ್ತಿಲ್ಲ. 2–3 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜನಸಾಮಾನ್ಯರಿಗೆ ತೀವ್ರ ತೊಂದರೆ ಎದುರಾಗಬಹುದು’ ಎನ್ನುತ್ತಾರೆ ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಂಡಗೋಡಿನ ಆರ್‌.ವಿ.ಪಾಲೇಕರ್‌.

‘1988ರಲ್ಲಿ ಮುಂಡಗೋಡ ತಾಲ್ಲೂಕಿನ ಅಗಡಿಯಲ್ಲಿ ಪ್ರಾರಂಭಿಸಿರುವ ನಮ್ಮ ಅಕ್ಕಿ ಗಿರಣಿಯನ್ನು ರಾತ್ರಿ ಮಾತ್ರ ಬಾಗಿಲು ಮುಚ್ಚಿದ್ದು ಹೊರತುಪಡಿಸಿದರೆ ಒಮ್ಮೆಯೂ ಹಗಲಿನಲ್ಲಿ ಕದ ಮುಚ್ಚಿ ಕಾರ್ಯ ಸ್ಥಗಿತಗೊಳಿಸಿದ ಸಂದರ್ಭ ಇರಲಿಲ್ಲ. ಪ್ರತಿ ದಿನ ಸುಮಾರು 50 ಟನ್‌ ಅಕ್ಕಿ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಈಗಿನ ಸರ್ಕಾರದ ಲೆವಿ ನೀತಿಯಿಂದಾಗಿ ಕೆಲಸ ಸ್ಥಗಿತಗೊಳಿಸುವ ಅನಿವಾರ್ಯತೆ ಬಂದಿದೆ. ಸರ್ಕಾರದ ನಿಯಮದ ಪ್ರಕಾರ ಲೆವಿ ನೀಡಿದರೆ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಭತ್ತದಷ್ಟೇ ಪ್ರಮಾಣದಲ್ಲಿ ಲೆವಿ ಮೊತ್ತ ನೀಡಬೇಕಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಹಶೀಲ್ದಾರ್‌ಗೆ ಮನವಿ: ಶಿರಸಿ ತಾಲ್ಲೂಕಿನಲ್ಲಿ 24 ಅಕ್ಕಿ ಗಿರಣಿಗಳಿದ್ದು, ಎಲ್ಲ ಗಿರಣಿಗಳು ಚಟುವಟಿಕೆ ಸ್ಥಗಿತಗೊಳಿಸಿವೆ.

ತಾಲ್ಲೂಕು ಘಟಕ ಅಧ್ಯಕ್ಷ ಜಯರಾಮ ನಾಯಕ್‌ ನೇತೃತ್ವದಲ್ಲಿ ಅಕ್ಕಿ ಗಿರಣಿ ಮಾಲೀಕರು ಇಲ್ಲಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಲೇವಿ ಆಕರಣೆ ಅವೈಜ್ಞಾನಿಕ: ‘ತಾಲ್ಲೂಕಿನ ಎಲ್ಲ ಅಕ್ಕಿ ಗಿರಣಿಗಳು 50 ವರ್ಷಕ್ಕಿಂತ ಹೆಚ್ಚು ಹಳೆಯದಾಗಿವೆ. ಎಲ್ಲ ಗಿರಣಿಗಳಲ್ಲಿ ರೈತರ ಅಕ್ಕಿಯನ್ನು ಮಾತ್ರ ಮಾಡಿಕೊಡಲಾಗುತ್ತಿದ್ದು, ಸ್ವಂತ ಅಕ್ಕಿ ತಯಾರಿ ಹಾಗೂ ಮಾರಾಟ ಮಾಡಲಾಗುತ್ತಿಲ್ಲ. ರೈತರ ಅಕ್ಕಿ ಮಾಡುವ ಮಿಲ್‌ಗಳಿಗೆ ರಾಜ್ಯದಲ್ಲಿ ಲೆವಿ ಇಲ್ಲ. ಆದರೂ ನಮ್ಮ ಗಿರಣಿಗಳಿಗೆ ವಿದ್ಯುತ್ ರಿಡಿಂಗ್ ಪ್ರಕಾರ
ಲೆವಿ ಆಕರಣೆ ಮಾಡಿರುವುದು ಅವೈಜ್ಞಾನಿಕವಾಗಿದೆ’ ಎಂದು ಜಯರಾಮ ನಾಯಕ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.