ADVERTISEMENT

ಜನರು ಹತ್ತಿರ ಸೇರಿಸಲ್ಲ, ಕೂಲಿ ಇಲ್ಲ, ಊಟವೂ ಇಲ್ಲ: ವಾರದಿಂದ ದಂಪತಿ ಪರದಾಟ

ಕೆಲಸಕ್ಕೆ ಬಂದ ಗ್ರಾಮದಲ್ಲಿ ಸೇರಿಸಿಕೊಳ್ಳುತ್ತಿಲ್ಲ, ಊರಿಗೆ ಹೋಗಲಾಗುತ್ತಿಲ್ಲ

ಸಂತೋಷ ಹಬ್ಬು
Published 1 ಏಪ್ರಿಲ್ 2020, 5:49 IST
Last Updated 1 ಏಪ್ರಿಲ್ 2020, 5:49 IST
ತಮ್ಮ ಊರಿಗೆ ತೆರಳಲು ಪ್ರಯಾಣದ ಪಾಸ್ ‍ಪಡೆಯಲು ಹಳಿಯಾಳದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮಂಗಳವಾರ ಕಾಯುತ್ತಾ ಕುಳಿತ ಮಹಾರಾಷ್ಟ್ರದ ಬೀಡ್ ಗ್ರಾಮದ ನಿವೃತ್ತಿ ಸಕಾರಾಮ ಕಾಂಬಳೆ ದಂಪತಿ
ತಮ್ಮ ಊರಿಗೆ ತೆರಳಲು ಪ್ರಯಾಣದ ಪಾಸ್ ‍ಪಡೆಯಲು ಹಳಿಯಾಳದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮಂಗಳವಾರ ಕಾಯುತ್ತಾ ಕುಳಿತ ಮಹಾರಾಷ್ಟ್ರದ ಬೀಡ್ ಗ್ರಾಮದ ನಿವೃತ್ತಿ ಸಕಾರಾಮ ಕಾಂಬಳೆ ದಂಪತಿ   

ಹಳಿಯಾಳ: ‘ಒಂದು ವಾರದಿಂದ ಊಟಕ್ಕಾಗಿ ಪರದಾಡುತ್ತಿದ್ದೇವೆ. ಗ್ರಾಮದಲ್ಲಿಯೂ ನಮ್ಮನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮೂರಿಗೆ ಹೋಗಲೂಬಿಡುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿನಾವು19 ಮಂದಿಯಿದ್ದೇವೆ...’ ಎನ್ನುತ್ತ ಅವರು‌ದುಃಖಿತರಾದರು.

ಮಹಾರಾಷ್ಟ್ರದ ಬೀಡ್ ಗ್ರಾಮದ ವೃತ್ತಿ ಸಕಾರಾಮ ಕಾಂಬಳೆ ಹಾಗೂ ಅನಿತಾ ನಿವೃತ್ತಿ ಕಾಂಬಳೆ ದಂಪತಿ, ಹಳಿಯಾಳದ ತೇರಗಾಂವ ಗ್ರಾಮಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಕಬ್ಬು ಕಟಾವು ಮಾಡಲುಬಂದವರು.

ತಮ್ಮ ಊರಿಗೆ ತೆರಳಲು ಪ್ರಯಾಣದ ‍ಪಾಸ್ ‍ಪಡೆಯುವ ಸಲುವಾಗಿ ಎಲ್ಲರೂ ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಕಾದು ಕುಳಿತಿದ್ದಾಗಮಾತಿಗೆ ಸಿಕ್ಕಿದರು.

ADVERTISEMENT

‘19 ಜನರ ತಂಡದೊಂದಿಗೆ ನಾವು ಬಂದಿದ್ದೇವೆ. ಗ್ರಾಮದ ಹೊರಗೆ ಗದ್ದೆಯಲ್ಲಿ ಟೆಂಟ್ ಹಾಕಿ ಉಳಿದುಕೊಂಡು ಕಬ್ಬು ಕಟಾವು ಮಾಡಿದ್ದೆವು. 19 ಜನರಲ್ಲಿ 12 ಜನರು ದುಡಿಯುವವರು. ತಂಡದಲ್ಲಿ ಏಳು ಮಕ್ಕಳಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಊಟಕ್ಕೂ ಗತಿಯಿಲ್ಲದೇ ತೀರಾ ತೊಂದರೆಯಲ್ಲಿದ್ದೇವೆ. ತೇರಗಾಂವ ಗ್ರಾಮದಲ್ಲೂ ನಮಗೆ ಪ್ರವೇಶ ನೀಡುತ್ತಿಲ್ಲ. ಸ್ವಗ್ರಾಮಕ್ಕೆ ತೆರಳಲೂಆಗುತ್ತಿಲ್ಲ’ ಎಂದು ದುಃಖಿತರಾದರು.

ಇದೇವೇಳೆ, ಸ್ಥಳೀಯ ಪತ್ರಕರ್ತ ನಾಗರಾಜ ಶಹಾಪುರಕರ, ಹಳಿಯಾಳದಲ್ಲಿ ಇತ್ತೀಚಿಗೆ ಆರಂಭವಾದ ‘ಕೋವಿಡ್– 19 ವಿ ಕೇರ್ ಫಾರ್ ಯು’ ತಂಡಕ್ಕೆ ಕರೆ ಮಾಡಿದರು. ಇದಕ್ಕೆ ಸ್ಪಂದಿಸಿದ ತಂಡದ ನವೀನ ಕಾಟ್ಕರ ಹಾಗೂ ರವಿ ತೋರಣಕಟ್ಟಿ, ಸಹಾಯದ ನಿರೀಕ್ಷೆಯಲ್ಲಿದ್ದ ದಂಪತಿಗೆ ಆಹಾರ ಧಾನ್ಯ ಮತ್ತಿತರ ಅವಶ್ಯ ವಸ್ತುಗಳನ್ನು ಪೂರೈಸಿದರು. ಪೊಲೀಸ್ ಇಲಾಖೆಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.

‘ಸಂಕಷ್ಟದಲ್ಲಿದ್ದರೆ ಕರೆ ಮಾಡಿ’:‘ಹಳಿಯಾಳಪಟ್ಟಣದಲ್ಲಿ ಈಗ ತೊಂದರೆಯಲ್ಲಿರುವಬಡವರು, ಮೊಬೈಲ್: 81099 10877ಗೆ ಕರೆ ಮಾಡಬಹುದು. ಸಂಕಷ್ಟದಲ್ಲಿರುವವರ ಮನೆ ಬಾಗಿಲಿಗೇತಂಡದ ಸದಸ್ಯರು ಅಗತ್ಯ ವಸ್ತುಗಳನ್ನು ಪೂರೈಸುತ್ತಾರೆ. ತಂಡದಲ್ಲಿ ಏಳು ಸದಸ್ಯರಿದ್ದಾರೆ.ರವಿ ತೋರಣಕಟ್ಟಿ, ಬಸವರಾಜ ಹೀರೆಮೊರಬ, ಇಲಿಯಾಸ್ ಬಾಳೆಕುಂದ್ರಿ, ಅಖಿಲೇಶ ಮರಾಠೆ, ಗುರು ಕಮ್ಮಾರ, ಮಂಜುನಾಥ ಗಾಣಗೇರ ನೆರವಿಗೆ ಸದಾ ಸಿದ್ಧರಿದ್ದಾರೆ’ ಎಂದು ‘ಕೋವಿಡ್– 19 ವಿ ಕೇರ್ ಫಾರ್ ಯು’ ತಂಡದ ನವೀನ ಕಾಟ್ಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.