ADVERTISEMENT

ಉತ್ತರ ಕನ್ನಡ | ಒಂದೇ ದಿನ 40 ಜನರಿಗೆ ಸೋಂಕು ದೃಢ

ಜಿಲ್ಲೆಯಲ್ಲಿ ಗಂಭೀರ ಸ್ವರೂಪದಲ್ಲಿ ಹೆಚ್ಚಳ ಕಾಣುತ್ತಿರುವ ಕೋವಿಡ್ ಪೀಡಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 14:28 IST
Last Updated 30 ಜೂನ್ 2020, 14:28 IST
   

ಕಾರವಾರ: ಜಿಲ್ಲೆಯಲ್ಲಿ ಕೋವಿಡ್–19 ಪೀಡಿತರ ಸಂಖ್ಯೆಯು ಗಂಭೀರ ಸ್ವರೂಪದಲ್ಲಿ ಏರಿಕೆ ಕಾಣುತ್ತಿದ್ದು, ಮಂಗಳವಾರಒಂದೇ ದಿನ 40 ಜನರಿಗೆ ದೃಢಪಟ್ಟಿದೆ. ಅವರಲ್ಲಿ ಹಲವರು ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು. ಕೆಲವರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದವರಾಗಿದ್ದಾರೆ.

ಹೊಸದಾಗಿ ಸೋಂಕು ಖಚಿತವಾದವರಲ್ಲಿ ಭಟ್ಕಳ ತಾಲ್ಲೂಕಿನವರೇ21 ಮಂದಿ ಇದ್ದಾರೆ. ಉಳಿದಂತೆ, ಹಳಿಯಾಳ ತಾಲ್ಲೂಕಿನ ಎಂಟು, ಅಂಕೋಲಾ ತಾಲ್ಲೂಕಿನ ಐವರು, ಕುಮಟಾ ತಾಲ್ಲೂಕಿನ ನಾಲ್ವರು ಹಾಗೂ ಮುಂಡಗೋಡದ ಇಬ್ಬರು ಸೇರಿದ್ದಾರೆ.

ಸೋಂಕಿತರ ವಿವರ: ಮುಂಡಗೋಡದಟಿಬೆಟನ್ ನಿರಾಶ್ರಿತರ ಶಿಬಿರದ ಎರಡನೇ ಕ್ಯಾಂಪ್‌ ನಿವಾಸಿ,ಈಗಾಗಲೇ ಸೋಂಕಿತರಾಗಿರುವ ಬೌದ್ಧ ಬಿಕ್ಕುವಿನ (ಪಿ 178) ಪ್ರಾಥಮಿಕ ಸಂಪರ್ಕಕ್ಕೆ ಬಂದ ಇಬ್ಬರಿಗೆ ಸೋಂಕು ದೃಢವಾಗಿದೆ. ಅವರಲ್ಲಿ 12 ವರ್ಷದ ಬಾಲಕ ಮತ್ತು 17 ವರ್ಷದ ಬಾಲಕಿಒಳಗೊಂಡಿದ್ದಾರೆ.

ADVERTISEMENT

ಮಹಾರಾಷ್ಟ್ರದಿಂದ ಕುಮಟಾ ತಾಲ್ಲೂಕಿನ ಮೊರಬಾಕ್ಕೆ ಬಂದಿರುವ ಏಳು ವರ್ಷದ ಬಾಲಕ, ಕೋಡ್ಕಣಿಯ 16 ವರ್ಷದ ಬಾಲಕ, ಗೋಕರ್ಣ ಹೊಸಕಟ್ಟಾದ 27 ವರ್ಷದ ಯುವತಿ, ಐಗಳಕೂರ್ವೆಯ 35 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ಅಂಕೋಲಾದ ಶೇಡಿಕಟ್ಟಾ ಅಗ್ರಗೋಣದಲ್ಲಿ ಮಂಗಳವಾರ ಕೋವಿಡ್ ದೃಢಪಟ್ಟವರೆಲ್ಲರೂ ಸೋಂಕಿತರೊಬ್ಬರ (ಪಿ 10648) ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಅವರಲ್ಲಿ 25 ವರ್ಷದ ಯುವಕ, 49, 33 ಹಾಗೂ 72 ವರ್ಷದ ಪುರುಷರು, 65ವರ್ಷದ ಮಹಿಳೆ ಸೇರಿದ್ದಾರೆ.

ಭಟ್ಕಳದಮುಖ್ಯರಸ್ತೆಯ ಪ್ರದೇಶದಲ್ಲಿ ಸೋಂಕಿತರಾದವರು ಪಿ 13314 ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಅವರಲ್ಲಿ ಒಂದು ವರ್ಷ ಹಾಗೂ ಏಳು ವರ್ಷ ಇಬ್ಬರು ಬಾಲಕಿಯರು ಸೇರಿದಂತೆ12 ಮಂದಿ ಇದ್ದಾರೆ. ಇದೇರೀತಿ, ರೋಗಿ ಸಂಖ್ಯೆ ಪಿ 12047 ಸಂಪರ್ಕಕ್ಕೆ ಬಂದ ಎಂಟು ಮಂದಿಗೆ ಕೋವಿಡ್ ಖಚಿತವಾಗಿದೆ. ಅವರೆಲ್ಲರೂ ನವಾಯತ ಕಾಲೊನಿ ಮತ್ತು ಜಾಮಿಯಾ ರಸ್ತೆಯ ನಿವಾಸಿಗಳಾಗಿದ್ದಾರೆ. ಹಲವರು ಒಂದೇ ಕುಟುಂಬದವರೂ ಸೇರಿದ್ದಾರೆ. ಮುರ್ಡೇಶ್ವರದ ಮಾವಳ್ಳಿಯ 39 ವರ್ಷದ ವ್ಯಕ್ತಿಯೊಬ್ಬರು ಸೋಂಕಿತರಾಗಿದ್ದು, ಅವರು ಮಂಗಳೂರು ಬಂದರಿಗೆ ಭೇಟಿ ನೀಡಿದ್ದರು.

ದಾಂಡೇಲಿಯಲ್ಲೂ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಮಹಾರಾಷ್ಟ್ರದ ಮೀರಜ್‌ನಿಂದ ಬಂದಿರುವ 21 ವರ್ಷದ ಯುವತಿ, ನಾಲ್ಕು ವರ್ಷದ ಬಾಲಕಿಗೆ ಕೋವಿಡ್ ದೃಢಪಟ್ಟಿದೆ.ಗಣೇಶನಗರದ 48 ವರ್ಷದ ವ್ಯಕ್ತ ಸೋಂಕಿತರಾಗಿದ್ದು, ಆಂಧ್ರಪ್ರದೇಶದಿಂದ ಬಂದಿದ್ದರು. ಬಂಗೂರನಗರದ 51 ವರ್ಷ ಮಹಿಳೆ ಗುಜರಾತ್‌ನ ವಾಪಿಯಿಂದ ಮರಳಿದ್ದರು.

ಹಳಿಯಾಳದ ಮುರ್ಕವಾಡಕ್ಕೆ ಮಹಾರಾಷ್ಟ್ರದ ಉಲ್ಲಾಸನಗರದಿಂದವಾಪಸಾಗಿರುವ 12 ವರ್ಷ ಬಾಲಕಿ, 28 ವರ್ಷದ ಮಹಿಳೆ, ಪುಣೆಯಿಂದ ಬಂದಿರುವ ಕೆ.ಎಚ್.ಬಿ ಕಾಲೊನಿ ನಿವಾಸಿ 72 ವರ್ಷದ ಮಹಿಳೆ ಹಾಗೂ 76 ವರ್ಷದ ವ್ಯಕ್ತಿಯೂ ಸೋಂಕಿತರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಏಳು ಮಂದಿ ಗುಣಮುಖ:ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಏಳು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ವಾರ್ಡ್‌ನಿಂದ ಬುಧವಾರ ಬಿಡುಗಡೆ ಮಾಡಲಾಯಿತು.

ಅವರಲ್ಲಿ ಹೊನ್ನಾವರದ ಎರಡು ವರ್ಷದ ಬಾಲಕಿ, 28 ವರ್ಷದ ಯುವಕ, ಕುಮಟಾದ 56 ವರ್ಷದ ವ್ಯಕ್ತಿ, ಮುಂಡಗೋಡಿನ 45 ವರ್ಷದ ಮಹಿಳೆ, 19 ವರ್ಷದ ಯುವತಿ, 32 ವರ್ಷದ ವ್ಯಕ್ತಿ, ಭಟ್ಕಳದ 29 ವರ್ಷದ ಯುವಕ ಸೇರಿದ್ದಾರೆ.

ಕೋವಿಡ್ ಪೀಡಿತ, ಉಸಿರಾಟದ ತೊಂದರೆ ಎದುರಿಸುತ್ತಿರುವ ಅಂಕೋಲಾದ 45 ವರ್ಷದ ವ್ಯಕ್ತಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಸದ್ಯ 92 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 253ಕ್ಕೇರಿದೆ. ಅವರಲ್ಲಿ 161 ಜನ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.