ADVERTISEMENT

ಎಸ್ಸೆಸ್ಸೆಲ್ಸಿ: 603 ವಿದ್ಯಾರ್ಥಿಗಳು ಗೈರು

ಗಣಿತ ಅಷ್ಟೇನೂ ಸುಲಭವಿರಲಿಲ್ಲ: ಮಕ್ಕಳ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 11:55 IST
Last Updated 27 ಜೂನ್ 2020, 11:55 IST
ಶಿರಸಿಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಎರಡನೇ ವಿಷಯ ಗಣಿತ ಪರೀಕ್ಷೆ ಬರೆದರು
ಶಿರಸಿಯ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಎರಡನೇ ವಿಷಯ ಗಣಿತ ಪರೀಕ್ಷೆ ಬರೆದರು   

ಶಿರಸಿ: ಎಸ್ಸೆಸ್ಸೆಲ್ಸಿಯ ಎರಡನೇ ಪರೀಕ್ಷೆ ಗಣಿತ ವಿಷಯವು ಶನಿವಾರ ಸುಗಮವಾಗಿ ನಡೆಯಿತು. ಮೊದಲ ದಿನದ ಪರೀಕ್ಷೆಯಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕೈಗೆ ಸ್ಯಾನಿಟೈಸರ್ ಹಾಕಿ, ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 603 ಮಕ್ಕಳು ಗೈರಾಗಿದ್ದರು.

ಪರೀಕ್ಷೆಗೆ ಒಟ್ಟು 10,586 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅವರಲ್ಲಿ 9983 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಅನಾರೋಗ್ಯದ ಕಾರಣ ಶೈಕ್ಷಣಿಕ ಜಿಲ್ಲೆಯ ಮೂವರು ಬಾಲಕರು, ಇಬ್ಬರು ಬಾಲಕಿಯರು ಪ್ರತ್ಯೇಕ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದರು. ಪರೀಕ್ಷೆ ಬರೆಯಲು ಬರುವ ಮಕ್ಕಳ ಅನುಕೂಲಕ್ಕೆ ಸಾರಿಗೆ ಸಂಸ್ಥೆಯ ಬಸ್, ಇತರ ವಾಹನ ಸೇರಿ ಒಟ್ಟು 107 ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.

ಒಟ್ಟು 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಗ್ರಾಮೀಣ ಪ್ರದೇಶದ ಕೇಂದ್ರಗಳಲ್ಲೂ ಎಲ್ಲ ರೀತಿ ಸುರಕ್ಷಾ ಕ್ರಮಗಳನ್ನು ಕೈಗೊಂಡು, ಮಕ್ಕಳು ಪರಸ್ಪರ ಗುಂಪುಗೂಡದಂತೆ ಎಚ್ಚರಿಕೆ ವಹಿಸಲಾಯಿತು.

ADVERTISEMENT

ಬೇರೆ ಜಿಲ್ಲೆಗಳಿಂದ ವಲಸೆ ಬಂದಿದ್ದ 369 ಮಕ್ಕಳಲ್ಲಿ 367 ಮಕ್ಕಳು ಪರೀಕ್ಷೆ ಬರೆದರು. ಇಬ್ಬರು ಗೈರಾಗಿದ್ದರು. ಕಂಟೈನ್ಮೆಟ್ ವಲಯದ 20 ಮಕ್ಕಳು ಪರೀಕ್ಷೆ ಬರೆದರು. ಶಿರಸಿಯ ಪ್ರೊಗ್ರೆಸ್ಸಿವ್ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಜ್ವರ ಕಾಣಿಸಿಕೊಂಡ ಕಾರಣ, ಆಕೆಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು.

ಗಣಿತ ಪರೀಕ್ಷೆಯ ಬಗ್ಗೆ ಮಕ್ಕಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ‘ಗಣಿತ ವಿಷಯ ಯಾವತ್ತಿಗೂ ಅತಿ ಸುಲಭವಲ್ಲ. ಪರೀಕ್ಷೆಗಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ. ಆದರೂ, ಕೆಲವು ಪ್ರಶ್ನೆಗಳು ಕಠಿಣವಾಗಿದ್ದವು’ ಎಂದು ವಿದ್ಯಾರ್ಥಿನಿಯರಾದ ಸಿಂಚನಾ, ಸಿಂಧು ಅಭಿಪ್ರಾಯ ವ್ಯಕ್ತಪಡಿಸಿದರು. ‘ಗಣಿತ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಕೆಲವು ಪ್ರಶ್ನೆಗಳು ತಾರ್ತಿಕವಾಗಿ ಕೇಳಿದ್ದರು. ಅರ್ಥೈಸಿಕೊಂಡು ಬರೆಯಬೇಕಾಯಿತು’ ಎಂದು ವಿದ್ಯಾರ್ಥಿ ರೋಹಿತ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.