ADVERTISEMENT

ನಗರಸಭೆ ಚುನಾವಣೆ: ಶೇ 64.66 ಮತದಾನ

ಚುನಾವಣೆಯಲ್ಲಿ ನಿರಾಸಕ್ತಿ ತೋರಿದ ನಗರದ ಜನರು, ಹಿಂದುಳಿದ ಪ್ರದೇಶಗಳಲ್ಲಿ ಹಕ್ಕು ಚಲಾಯಿಸಿದ ಮತದಾರರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 14:14 IST
Last Updated 31 ಆಗಸ್ಟ್ 2018, 14:14 IST
ಶಿರಸಿ ನಗರಸಭೆಯ 31ನೇ ವಾರ್ಡಿನಲ್ಲಿ ಮತದಾರರು ಸರದಿಯಲ್ಲಿ ನಿಂತು ಮತಚಲಾಯಿಸಿದರು
ಶಿರಸಿ ನಗರಸಭೆಯ 31ನೇ ವಾರ್ಡಿನಲ್ಲಿ ಮತದಾರರು ಸರದಿಯಲ್ಲಿ ನಿಂತು ಮತಚಲಾಯಿಸಿದರು   

ಶಿರಸಿ: ಮತದಾರರ ಪಟ್ಟಿಯಲ್ಲಿನ ಗೊಂದಲ, ರಾಮನಬೈಲಿನಲ್ಲಿ ಅಭ್ಯರ್ಥಿಗಳ ನಡುವೆ ನಡೆದ ಮಾತಿನ ಚಕಮಕಿ ಹೊರತುಪಡಿಸಿ, ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ಶುಕ್ರವಾರ ಶಾಂತಿಯುತ ಚುನಾವಣೆ ನಡೆಯಿತು. ಶೇ 64.66ರಷ್ಟು ಮತದಾನ ದಾಖಲಾಗಿದೆ.

29ನೇ ವಾರ್ಡಿನಲ್ಲಿ ಅತಿ ಹೆಚ್ಚು ಅಂದರೆ, ಶೇ 74.06 ಮತದಾನವಾಗಿದ್ದರೆ, 15ನೇ ವಾರ್ಡಿನಲ್ಲಿ ಶೇ 55.97ರಷ್ಟು ಜನರು ಮಾತ್ರ ಹಕ್ಕು ಚಲಾಯಿಸಿದ್ದಾರೆ. ಬೆಳಿಗ್ಗೆ 6.15ಕ್ಕೆ ಮತಗಟ್ಟೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಅಣಕು ಮತದಾನ ನಡೆಸಿದರು. 7 ಗಂಟೆಗೆ ಆರಂಭವಾದ ಮತದಾನ ಮಂದಗತಿಯಲ್ಲಿ ಸಾಗಿತು. 9 ಗಂಟೆಯವರೆಗೆ ಶೇ 12.34ರಷ್ಟು ಮಾತ್ರ ಮತದಾನವಾಗಿತ್ತು.

11 ಗಂಟೆಯ ನಂತರ ಕೆಲವು ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದು ಕಂಡುಬಂತು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶೇ 45.91 ಜನರು ಮತ ಹಾಕಿದ್ದರು. ಮಧ್ಯಾಹ್ನ 3 ಗಂಟೆಯ ನಂತರ ಮತ್ತೆ ಅಲ್ಪ ಚುರುಕಾಗಿ ಮತದಾನ ನಡೆಯಿತು. 17ನೇ ವಾರ್ಡಿನ ಮತದಾರರಾಗಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಮತ ಚಲಾಯಿಸಿದರು. ಒಟ್ಟು 57 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತಯಂತ್ರಗಳನ್ನು ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯ ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಸೆ.3ರಂದು ಮತ ಎಣಿಕೆ ನಡೆಯಲಿದೆ.

ADVERTISEMENT

ವಾರ್ಡ್ ವಿಂಗಡಣೆಯ ಅವಾಂತರ:ವಾರ್ಡ್ ವಿಂಗಡಣೆಯು ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸಿದೆ. ಒಂದೇ ಕುಟುಂಬದ ಸದಸ್ಯರ ಹೆಸರು ಬೇರೆ ಬೇರೆ ವಾರ್ಡ್‌ಗಳಲ್ಲಿ ಸೇರಿದೆ. ಪತಿಯ ಹೆಸರು ಒಂದು ವಾರ್ಡಿನಲ್ಲಿದ್ದರೆ, ಪತ್ನಿಯ ಹೆಸರು ಇನ್ನೊಂದು ವಾರ್ಡಿನಲ್ಲಿ, ಅದೇ ಕುಟುಂಬ ಇನ್ನಿತರ ಸದಸ್ಯರ ಹೆಸರು ಬೇರೆ ವಾರ್ಡಿನಲ್ಲಿರುವುದಕ್ಕೆ ಮತಗಟ್ಟೆಗೆ ಬಂದಿದ್ದ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

30ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವಿನ ದ್ವೇಷವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಪೊಲೀಸರು ಮಧ್ಯೆ ಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದರು. ಅಂಗವಿಕಲರಿಗೆ ಅನುಕೂಲವಾಗುವಂತೆ ತಾಲ್ಲೂಕು ಆಡಳಿತವು ಕೆಲವು ಬೂತ್‌ಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.