
ಅಂಕೋಲಾ : ಅಧರ್ಮ, ಪಾಪಕೃತ್ಯ, ಬೇರೆಯವರಿಗೆ ತೊಂದರೆ ಮಾಡದೆ ಸಕಲರ ಒಳಿತನ್ನೇ ಬಯಸುವವನೇ ನಿಜವಾದ ಹಿಂದೂ. ಹಿಂದೂ ಧರ್ಮದ ಮೂಲ ತತ್ವ ವಸುಧೈವ ಕುಟುಂಬಕಂ ಎಂದರೆ ಜಗತ್ತೇ ಒಂದು ಕುಟುಂಬ ಎಂದರ್ಥ ಎಂದು ಸಿದ್ದಾಪುರದ ಶ್ರೀ ಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೇಣಿಯ ವಿವೇಕಾನಂದ ಕ್ರೀಡಾಂಗಣದಲ್ಲಿ ಮಂಗಳವಾರ ಭಾವಿಕೇರಿ ಮಂಡಲ ವತಿಯಿಂದ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಆಚಾರ ವಿಚಾರ, ಪರಂಪರೆ ಸಂಸ್ಕೃತಿ ಹಬ್ಬಗಳ ಆಚರಣೆ ಬಗ್ಗೆ ಕಥೆ ರೂಪದಲ್ಲಿ ಮಕ್ಕಳಿಗೆ ತಿಳಿಸಿ. ಹಿಂದುಗಳ ಹೊಸ ವರ್ಷ ಯುಗಾದಿಯಾಗಿದ್ದು ಡಿಸೆಂಬರ್ ನಂತರ ಕ್ಯಾಲೆಂಡರ್ ಅಷ್ಟೇ ಬದಲಾಗುತ್ತದೆ ಪ್ರಕೃತಿ ಬದಲಾಗುವುದಿಲ್ಲ. ಹಿಂದೂ ಸಂಸ್ಕೃತಿ, ಆಚಾರ, ಪರಂಪರೆಗಳು ನಮ್ಮ ಜೀವನಕ್ಕೆ ಬಹಳ ಮುಖ್ಯ ಇವು ನಮ್ಮ ಗುರುತು, ನಮ್ಮ ಮೌಲ್ಯಗಳು ಎಂದರು.
ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಮಾತನಾಡಿ, ಸಂಸ್ಕೃತಿ ಪರಂಪರೆ ಓದಿ ತಿಳಿದುಕೊಂಡು ಸಂಘಟಿತವಾಗದಿದ್ದರೆ ಅಪಾಯ ಇದೆ. ಭಾರತಕ್ಕಾಗಿ ಬದುಕುವ ಸಂಕಲ್ಪ ಮಾಡಿ, ಈಗ ಸದ್ಯ ಒಡೆದು ಆಳುವ ರೀತಿ ನಡಿತಾ ಇದೆ. ಅಂದು ಆ ವೀರರು ಹಿಂದೂ ಧರ್ಮಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಕ್ಕೆ ಇಂದು ನಾವು ಹಿಂದೂವಾಗಿ ಇದ್ದೇವೆ ಎಂದರು.
ಹಿಂದೂ ಸಮಾಜೋತ್ಸವ ಭಾವಿಕೇರಿ ಮಂಡಲ ಉಪಾಧ್ಯಕ್ಷ ಸಂದೀಪ್ ಬಂಟ ಮಾತನಾಡಿದರು. ಮಂಡಲ ಸಮಿತಿಯ ಅಧ್ಯಕ್ಷ ರಾಜೇಶ ನಾಯಕ, ಸದಸ್ಯ ಸಂಜಯ ನಾಯ್ಕ, ತಾಲ್ಲೂಕು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ನಾಗೇಶ ನಾಯ್ಕ, ಉಪಾಧ್ಯಕ್ಷ ಸತೀಶ ನಾಯ್ಕ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.