ಶಿರಸಿ: ‘ಕೃತಿ ರೂಪದಲ್ಲಿ ಸಾಹಿತಿಗಳು ಅನೇಕ ಸಂಗತಿಗಳ ದಾಖಲೀಕರಣ ಮಾಡುತ್ತಾರೆ. ಅಂಥ ಉತ್ತಮ ಕೃತಿಗಳು ನಿರಂತರವಾಗಿ ಓದುಗರ ತೆಕ್ಕೆಗೆ ಬೀಳಬೇಕು’ ಎಂದು ನಟ ಸುಚೇಂದ್ರಪ್ರಸಾದ ತ್ರಿವೇದಿ ಹೇಳಿದರು.
ನಗರದ ರಂಗಧಾಮದಲ್ಲಿ ಭಾನುವಾರ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಬರೆದ ‘ಕರ್ಮಫಲ’ ಕಾದಂಬರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಕೃತಿಯಲ್ಲಿ ಕೃತಿಕಾರ ತಲ್ಲೀನವಾದರೆ ಮಾತ್ರ ಅತ್ಯುತ್ತಮ, ಜೀವಂತಿಕೆ ಹೊರಸೂಸುವ ಕೃತಿಗಳ ಜನನ ಸಾಧ್ಯ. ಬರಹಗಾರನ ತಲ್ಲಣ, ತಹತಹಿಕೆಗೆ ಸಂವಹನ ಸಾಧನವಾಗುವುದು ಕೃತಿ ರಚನೆ. ಅಂಥ ಕೃತಿಗಳು ಅಧ್ಯಯನಶೀಲತೆಯ ಭಾಗವಾಗುವ ಅಗತ್ಯವಿದೆ’ ಎಂದರು.
‘ಇಂದು ಮೌಢ್ಯ ಮತ್ತು ವಾಸ್ತವದ ನಡುವೆ ಬಹಳ ದೊಡ್ಡ ಕಂದಕ ಏರ್ಪಟ್ಟಿದೆ. ಕಾರಣ ಅವುಗಳ ಬಗ್ಗೆ ಆಳವಾದ ಅಧ್ಯಯನದ ಮೂಲಕ ಕೃತಿ ರಚಿಸಿದರೆ ಅನುಕೂಲ ಎಂದ ಅವರು, ಇಂದು ಸಾಹಿತ್ಯ ಲೋಕದ ತಟಸ್ಥ ಭಾವ ಹೊಂದಿದೆ. ಅದು ಉತ್ತಮ ಕೃತಿಗಳ ಮೂಲಕ ಧ್ವನಿಸಬೇಕು. ಪೂರ್ವಿಕರು ಬೋಧಿಸಿದ ಧರ್ಮವು ಕರ್ಮಫಲದ ಓದಿನೊಂದಿಗೆ ಮತ್ತೆ ಮತ್ತೆ ಮೆಲುಕು ಹಾಕಿದ ಅನುಭವವಾಗುತ್ತದೆ’ ಎಂದು ಪುಸ್ತಕದ ಕುರಿತು ಶ್ಲಾಘಿಸಿದರು.
ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ‘ಶರಾವತಿ ನದಿ ತಟದ ಜನಜೀವನ, ನೋವು, ನಲಿವುಗಳು, ಸಂಸ್ಕೃತಿಯ ಸೊಗಸು, ಭಾಷೆಗಳ ವಿವರಣೆಯನ್ನು ಒಳಗೊಂಡ ಪುಸ್ತಕವು ಓದುಗರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದರು.
ಯಾಜಿ ಪ್ರಕಾಶನದ ಮುಖ್ಯಸ್ಥೆ ಸವಿತಾ ಯಾಜಿ ಮಾತನಾಡಿದರು. ಕೃತಿಕಾರ ಸತೀಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತ ರವೀಂದ್ರ ಭಟ್ ಐನಕೈ, ಚಿಂತಕರ ಚಾವಡಿಯ ಎಸ್.ಎಸ್.ಭಟ್ ಇದ್ದರು. ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ಅಧ್ಯಕ್ಷತೆವಹಿಸಿದ್ದರು. ಡಾ.ಸೌಜನ್ಯ, ಸಂಚಿತಾ ಹೆಗಡೆ ಪ್ರಾರ್ಥಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ನಾರಾಯಣ ಭಾಗವತ ನಿರೂಪಿಸಿದರು. ಪರಶುರಾಮ ಮಲವಳ್ಳಿ ವಂದಿಸಿದರು.
ಪುಸ್ತಕ: ಕರ್ಮಫಲ
ಪುಟ:318
ಬೆಲೆ:₹360
ಪ್ರಕಾಶನ: ಯಾಜಿ ಪ್ರಕಾಶನ ಹೊಸಪೇಟೆ
ಯಾವುದೇ ಕೃತಿ ಓದುಗರನ್ನು ಹಿಡಿದಿಟ್ಟುಕೊಳ್ಳುವ ಬಿಟ್ಟು ಬಿಡದಂತೆ ಕಾಡುವಂತಿದ್ದರೆ ಬರೆದವರಿಗೆ ಸಾರ್ಥಕ ಭಾವ ಸಿಗುತ್ತದೆ.ಬಿ.ಪಿ.ಸತೀಶ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.