ADVERTISEMENT

ವರದಿ ಫಲಶ್ರುತಿ: ಅಂಚೆ ಕಚೇರಿ, ತಹಶೀಲ್ದಾರ್ ಕಚೇರಿಯಲ್ಲಿಯೂ ಆಧಾರ್ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 15:38 IST
Last Updated 7 ಜುಲೈ 2021, 15:38 IST
ಮುಂಡಗೋಡ ತಾಲ್ಲೂಕಿನ ಪಾಳಾ ನೆಮ್ಮದಿ ಕೇಂದ್ರಕ್ಕೆ ತಹಶೀಲ್ದಾರ್ ಶ್ರೀಧರ ಮುಂದಲಮನಿ ಬುಧವಾರ ಭೇಟಿ ನೀಡಿ, ಆಧಾರ್ ತಿದ್ದುಪಡಿಗೆ ಇದ್ದ ತಾಂತ್ರಿಕ ಸಮಸ್ಯೆ ಬಗೆಹರಿಸಿದರು
ಮುಂಡಗೋಡ ತಾಲ್ಲೂಕಿನ ಪಾಳಾ ನೆಮ್ಮದಿ ಕೇಂದ್ರಕ್ಕೆ ತಹಶೀಲ್ದಾರ್ ಶ್ರೀಧರ ಮುಂದಲಮನಿ ಬುಧವಾರ ಭೇಟಿ ನೀಡಿ, ಆಧಾರ್ ತಿದ್ದುಪಡಿಗೆ ಇದ್ದ ತಾಂತ್ರಿಕ ಸಮಸ್ಯೆ ಬಗೆಹರಿಸಿದರು   

ಮುಂಡಗೋಡ: ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಗೆ ರೈತರು, ಕಾರ್ಮಿಕರಿಗೆ ಆಗುತ್ತಿದ್ದ ಸಮಸ್ಯೆಯನ್ನು ಅರಿತು ಪಾಳಾ ಗ್ರಾಮದ ನೆಮ್ಮದಿ ಕೇಂದ್ರದಲ್ಲಿ ಬುಧವಾರ ಆಧಾರ್ ತಿದ್ದುಪಡಿ ಕೇಂದ್ರ ಪುನರ್ ಆರಂಭಿಸಲಾಗಿದೆ.

ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆಗೆ ತಾಲ್ಲೂಕಿನ ಜನರ ಪರದಾಡುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಬುಧವಾರ ವರದಿ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು, ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಕರೆ ಮಾಡಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರು ಪಾಳಾ ನೆಮ್ಮದಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, ಆಧಾರ್ ತಿದ್ದುಪಡಿ ಕೇಂದ್ರದಲ್ಲಿದ್ದ ತಾಂತ್ರಿಕ ಸಮಸ್ಯೆಗಳನ್ನು ಸಂಬಂಧಿಸಿದವರೊಂದಿಗೆ ಚರ್ಚಿಸಿ ಪರಿಹರಿಸಿದರು. ಅಲ್ಲದೇ ಮಧ್ಯಾಹ್ನದಿಂದಲೇ ಆಧಾರ್ ತಿದ್ದುಪಡಿ ಸೇವೆ ಆರಂಭವಾಯಿತು.

ADVERTISEMENT

‘ಗುರುವಾರದಿಂದ ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಅಧಾರ್ ತಿದ್ದುಪಡಿ ಕೇಂದ್ರ ಪುನರ್ ಆರಂಭವಾಗಲಿದೆ. ಅಲ್ಲದೇ ಇಲ್ಲಿನ ಅಂಚೆ ಕಚೇರಿಯಲ್ಲಿಯೂ ಆಧಾರ್ ಕೇಂದ್ರ ಪುನರ್ ಆರಂಭಿಸಲು ಜಿಲ್ಲಾಧಿಕಾರಿ ಅವರಿಂದ ಸೂಚನೆ ಬಂದಿದೆ. ಆಧಾರ್ ತಿದ್ದುಪಡಿ ಮಾಡಿಸುವರು, ಬ್ಯಾಂಕ್ ಆವರಣದಲ್ಲಿ ಮಲಗಿ ತೊಂದರೆ ಪಡುವುದು ಬೇಡ. ಅಂಚೆ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಪಾಳಾ ಗ್ರಾಮದಲ್ಲಿಯೂ ಆಧಾರ್ ತಿದ್ದುಪಡಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.