ADVERTISEMENT

ವಕೀಲರ ಹೊಲದಲ್ಲಿ ಸಾವಯವ ಬೇಸಾಯ ಮಾಡುತ್ತಿರುವ ಮಲ್ಲಿಕಾರ್ಜುನ ವಿ.ಅಷ್ಠೇಕರ

ಸಂತೋಷ ಹಬ್ಬು
Published 1 ಜನವರಿ 2019, 6:30 IST
Last Updated 1 ಜನವರಿ 2019, 6:30 IST
ಹಳಿಯಾಳ ತಾಲ್ಲೂಕಿನ ಮಾಲವಾಡ ಗ್ರಾಮದ ಮಲ್ಲಿಕಾರ್ಜುನ ಅಷ್ಠೇಕರ ತಮ್ಮ ಗದ್ದೆಯ ಆರೈಕೆ ಮಾಡುತ್ತಿರುವುದು.
ಹಳಿಯಾಳ ತಾಲ್ಲೂಕಿನ ಮಾಲವಾಡ ಗ್ರಾಮದ ಮಲ್ಲಿಕಾರ್ಜುನ ಅಷ್ಠೇಕರ ತಮ್ಮ ಗದ್ದೆಯ ಆರೈಕೆ ಮಾಡುತ್ತಿರುವುದು.   

ಹಳಿಯಾಳ: ವಕೀಲ ವೃತ್ತಿಯ ಜೊತೆಗೆ ಪ್ರತಿನಿತ್ಯ ಕೆಲವು ಗಂಟೆ ಕಡ್ಡಾಯವಾಗಿ ಗದ್ದೆಯಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಇವರು ತೊಡಗಿಕೊಳ್ಳುತ್ತಾರೆ.ತೋಟಗಾರಿಕೆಹಾಗೂವಾಣಿಜ್ಯ ಬೆಳೆಗಳನ್ನು ಬೆಳೆದು ಅಧಿಕ ಇಳುವರಿಪಡೆದು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಇವರಕೃಷಿ ಆಸಕ್ತಿಗೆ ‘ಪ್ರಗತಿಪರ ರೈತ’ ಪ್ರಶಸ್ತಿಯೂ ಪ್ರದಾನವಾಗಿದೆ.

ತಾಲ್ಲೂಕಿನ ಮಾಲವಾಡ ಗ್ರಾಮದ ಮಲ್ಲಿಕಾರ್ಜುನ ವಿ.ಅಷ್ಠೇಕರಅವರಿಗೆ ಕೃಷಿಯೆಂದರೆ ಅಚ್ಚುಮೆಚ್ಚು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವಎಂಟು ಎಕರೆ ಜಮೀನಿನಲ್ಲಿ ವೈವಿಧ್ಯಮಯ ಕೃಷಿ ಮಾಡಿದ್ದಾರೆ. ಗದ್ದೆಯ ಕಸ ಕಡ್ಡಿಗಳನ್ನು ತೆಗೆದು ಗೊಬ್ಬರ ಗುಂಡಿಯಲ್ಲಿ ಹಾಕಿ ದಾಸ್ತಾನು ಮಾಡುವುದು ದಿನಚರಿ. ಅದರಿಂದ ಸಾವಯವ ಗೊಬ್ಬರ ತಯಾರಿಸಿ ಗದ್ದೆಗೆ ಬಳಸುತ್ತಾರೆ. ಅವರು ಕಬ್ಬು, ಗೊಂಜಾಳ, ತೊಗರಿ, ಗೇರು, ಮಾವು, ಹಲಸು, ತರಕಾರಿಗಳಾದ ಮೂಲಂಗಿ, ಟೊಮೆಟೊ, ಶೇಂಗಾ, ಅವರೆ ಬೆಳೆದಿದ್ದಾರೆ.

ಗದ್ದೆಯಲ್ಲಿ 120 ಮಾವಿನ ಗಿಡ, 120 ಗೇರು, 60 ಲಿಂಬೆ, 20 ಹುಣಸೆ, 16 ತೆಂಗು, 100 ಸಾಗುವಾನಿ ಹಾಗೂ ಕಾಡುಜಾತಿಯ ಗಿಡಗಳಿವೆ. ಉತ್ತರ ಕರ್ನಾಟಕಕ್ಕೆ ಅಪರಿಚಿತವಾದ ಡ್ರ್ಯಾಗನ್ ಹಣ್ಣು,ಚೆರಿ, ಚಾಪೇಲಿಗಳನ್ನು ಸಹ ಯಶಸ್ವಿಯಾಗಿ ಬೆಳೆದಿದ್ದಾರೆ.ಸಾವಯವ ಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಹಾಗೂ ನಿಗದಿತ ಸಮಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎನ್ನುವುದು ಅವರ ಅನುಭವದ ಮಾತು.

ADVERTISEMENT

ಕೃಷಿ ಹೊಂಡದಿಂದ ನೀರಾವರಿ:40x40 ವಿಸ್ತಾರದ ಕೃಷಿ ಹೊಂಡ ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುತ್ತಾರೆ.ಪೂರ್ಣ ಗದ್ದೆಯಲ್ಲಿ ಎಲ್ಲೂ ನೀರು ಪೋಲಾಗದಂತೆ ನೋಡಿಕೊಳ್ಳುತ್ತಾರೆ. ಆ ಹೊಂಡದಲ್ಲಿ ಮೀನು ಮರಿಗಳನ್ನು ಸಾಕಿದ್ದಾರೆ. ಅವರ ಈ ಎಲ್ಲ ಆಸಕ್ತಿಯನ್ನು ಪರಿಗಣಿಸಿ ತಾಲ್ಲೂಕು ಆಡಳಿತವು ಈಚೆಗೆ ರೈತರ ದಿನಾಚರಣೆಯಂದುಸನ್ಮಾನಿಸಿದೆ.

ಜೈವಿಕ ಔಷಧ ಸಿಂಪಡಣೆ:200 ಲೀಟರ್‌ನ ಒಂದು ಬ್ಯಾರೆಲ್ ನೀರಿನಲ್ಲಿ 10 ಕೆ.ಜಿ ಸೆಗಣಿ, 10 ಲೀಟರ್ ಗೋಮೂತ್ರ, ಎರಡು ಕೆ.ಜಿ ಕರಿಬೆಲ್ಲ, ಎರಡುಕೆ.ಜಿ ದ್ವಿದಳ ಧಾನ್ಯದ ಹಿಟ್ಟು ಬೆರೆಸಬೇಕು. ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ಕೋಲಿನಿಂದ ಗಡಿಯಾರದ ಪೆಂಡೋಲದ ಮಾದರಿಯಲ್ಲಿ ತಿರುಗಿಸಬೇಕು. 3-4 ದಿನಗಳಲ್ಲಿಜೀವಾಮೃತ ಸಿದ್ಧಗೊಳ್ಳುತ್ತದೆ.ಅದನ್ನುಒಂದು ಎಕರೆ ಜಮೀನಿಗೆ 200 ಲೀಟರ್‌ನಷ್ಟು ಸಿಂಪಡಣೆ ಮಾಡಬೇಕು. ಇದರಿಂದ ಕೀಟಗಳ ಉಪಟಳ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ಈಗಾಗಲೇ ಜೀವಾಮೃತ ಸಿಂಪಡಣೆ ಹಾಗೂ ಸಾವಯವ ಗೊಬ್ಬರ ಬಳಕೆಯಿಂದ ಒಂದು ಎಕರೆ ಗದ್ದೆಯಲ್ಲಿ ಸುಮಾರು 40 ಟನ್ ಕಬ್ಬು ಬೆಳೆಯಲು ಸಾಧ್ಯವಾಗಿದೆ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.