ADVERTISEMENT

ಮುಂಡಗೋಡ | ಬಿತ್ತನೆಗೆ ಹದಗೊಳ್ಳುತ್ತಿರುವ ಹೊಲಗದ್ದೆಗಳು

ಬಿತ್ತನೆ ಬೀಜ ಖರೀದಿಯಲ್ಲಿ ನಿರತ ಅನ್ನದಾತ

ಶಾಂತೇಶ ಬೆನಕನಕೊಪ್ಪ
Published 21 ಮೇ 2020, 20:00 IST
Last Updated 21 ಮೇ 2020, 20:00 IST
ಮುಂಡಗೋಡ ತಾಲ್ಲೂಕಿನಲ್ಲಿ ಹೊಲಗದ್ದೆಗಳನ್ನು ಟ್ರ್ಯಾಕ್ಟರ್ ಗಳ ಮೂಲಕ ಬಿತ್ತನೆಗೆ ಹದಗೊಳಿಸುತ್ತಿರುವ ರೈತರು
ಮುಂಡಗೋಡ ತಾಲ್ಲೂಕಿನಲ್ಲಿ ಹೊಲಗದ್ದೆಗಳನ್ನು ಟ್ರ್ಯಾಕ್ಟರ್ ಗಳ ಮೂಲಕ ಬಿತ್ತನೆಗೆ ಹದಗೊಳಿಸುತ್ತಿರುವ ರೈತರು   

ಮುಂಡಗೋಡ:'ರೈತರು ವರ್ಷದ ಬೆಳೆಗೆ ಗದ್ದೆಯತ್ತ ಮುಖ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಬಿತ್ತನೆ ಕಾರ್ಯಕ್ಕೆ ಹೊಲಗದ್ದೆಗಳನ್ನು ಹಸನು ಮಾಡುವುದರಲ್ಲಿ ರೈತರು ನಿರತರಾಗಿದ್ದಾರೆ. ಇತ್ತೀಚಿನ ಒಂದೆರೆಡು ಮಳೆಗಳು ಗದ್ದೆಗಳಲ್ಲಿ ಹದವಾದ ವಾತಾರವಣ ನಿರ್ಮಿಸಿದೆ.

ಕಳೆದ ಒಂದು ವಾರದಿಂದ ಟ್ರಾಕ್ಟರ್ ಗಳ ಮೂಲಕ ಭೂಮಿ ಹದಮಾಡುತ್ತಿರುವ ರೈತರು, ಬಿತ್ತನೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಕೆಲವೆಡೆ ರೈತರು ಒಣಬಿತ್ತನೆ ಕಾರ್ಯ ಮಾಡುತ್ತಿದ್ದಾರೆ. ದಿನವಿಡಿ ಮೋಡ ಆಗುತ್ತಿರುವುದು, ಕೃಷಿ ಚಟುವಟಿಕೆಗೆ ವೇಗ ನೀಡಲು ಕಾರಣವಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಟ್ರಾಕ್ಟರ್ ಗಳಿಗೆ ಬೇಡಿಕೆ: ಟ್ರಾಕ್ಟರ್ ಮೂಲಕ ಹೊಲಗದ್ದೆಗಳನ್ನು ಹಸನು ಮಾಡಲು, ಹೆಚ್ಚಿನ ರೈತರು ಮುಂದಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಯಂತ್ರೋಪಕರಣದ ಕೃಷಿಗೆ ಬೇಡಿಕೆ ಹೆಚ್ಚಾಗಿದೆ. ಹಗಲು ರಾತ್ರಿ ಪಾಳೆಯದಲ್ಲಿ ರೈತರು ಹೊಲವನ್ನು ಸಜ್ಜುಗೊಳಿಸುತ್ತಿದ್ದಾರೆ. ಇಲ್ಲಿನ ಪೆಟ್ರೋಲ್ ಬಂಕ್‍ಗಳಲ್ಲಿ ರೈತರು ಸರದಿಯಲ್ಲಿ ನಿಂತು ಕ್ಯಾನ್‍ಗಳಲ್ಲಿ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದಾರೆ ಎಂದು ರೈತ ಫಕ್ಕೀರಪ್ಪ ಹೊಸಮನಿ ಹೇಳಿದರು.

ADVERTISEMENT

ಅತಿಕ್ರಮಣ ರೈತರನ್ನೂ ಪರಿಗಣಿಸಬೇಕು:'ತಾಲ್ಲೂಕಿನಲ್ಲಿ ಶೇ.30-35ರಷ್ಟು ಅತಿಕ್ರಮಣ ರೈತರಿದ್ದು, ಅವರಿಗೂ ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಬೇಕು. ಎಲ್ಲ ರೈತರೂ ಈಗ ಕಷ್ಟದಲ್ಲಿದ್ದಾರೆ. ರೈತರಲ್ಲಿ ಭೇದಭಾವ ಮಾಡದೆ, ಸಹಾಯ ಮಾಡಬೇಕು' ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ರಮೇಶ ರಾಯ್ಕರ್ ಒತ್ತಾಯಿಸಿದರು.

ಬಹುಬೆಳೆ ಬಿತ್ತಬೇಕು: 'ಮಳೆಯ ಏರಿಳಿತದಿಂದ ಹೆಚ್ಚಿನ ರೈತರು ಹಾನಿ ಅನುಭವಿಸುತ್ತಿದ್ದರಿಂದ, ಮೆಕ್ಕೆಜೋಳ ಹಾಗೂ ಭತ್ತ ಇವೆರಡನ್ನೂ ಸಮನಾಗಿ ಬಿತ್ತನೆ ಮಾಡಿದರೆ ಅನುಕೂಲ. ಒಂದೇ ಬೆಳೆ ಬಿತ್ತುವುದರಿಂದ ನಷ್ಟವಾಗುವ ಸಾಧ್ಯತೆ ಇರುತ್ತದೆ. ಒಬ್ಬ ರೈತನಿಗೆ ಗರಿಷ್ಠ 5 ಎಕರೆಗೆ ಸೀಮಿತಗೊಂಡಂತೆ, 3ಎಕರೆಗೆ ಮೆಕ್ಕೆಜೋಳ, 2 ಎಕರೆಗೆ ಭತ್ತ ಅಥವಾ ಅದಲು ಬದಲು ಪ್ರಮಾಣದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ' ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.

'ಕಾತೂರ, ಚಿಗಳ್ಳಿ, ಚವಡಳ್ಳಿ ಸೇರಿದಂತೆ ಕೆಲವೆಡೆ ಸ್ಥಳೀಯ ತಳಿಯ ಭತ್ತದ ಒಣಬಿತ್ತನೆ ಕಾರ್ಯ ನಡೆದಿದೆ. ಒಂದೆರೆಡು ಮಳೆಯಾದರೆ ಬಿತ್ತನೆ ಕೆಲಸ ಭರದಿಂದ ಸಾಗಲಿದೆ. ಸದ್ಯ ಬಿತ್ತನೆ ಬೀಜದ ದಾಸ್ತಾನು ಇದ್ದು, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.