ADVERTISEMENT

ತಂಪೆರೆದ ಮಳೆ: ಹೊಲ ಹಸನುಗೊಳಿಸುವ ಕಾಯಕ ಚುರುಕು

​ಶಾಂತೇಶ ಬೆನಕನಕೊಪ್ಪ
Published 15 ಮೇ 2025, 4:42 IST
Last Updated 15 ಮೇ 2025, 4:42 IST
ಮುಂಡಗೋಡ ತಾಲ್ಲೂಕಿನ ಕೊಪ್ಪ ಸನಿಹ ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಹಸನುಗೊಳಿಸುತ್ತಿರುವುದು
ಮುಂಡಗೋಡ ತಾಲ್ಲೂಕಿನ ಕೊಪ್ಪ ಸನಿಹ ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಹಸನುಗೊಳಿಸುತ್ತಿರುವುದು   

ಮುಂಡಗೋಡ: ಬಿರು ಬಿಸಿಲು ಧಗೆಯಿಂದ ಕಾದಿದ್ದ ಗದ್ದೆಗಳಲ್ಲಿ ವರುಣ ತಂಪೆರೆಚಿದ್ದು, ರೈತರು ವರ್ಷದ ದುಡಿಮೆಗೆ ಅಡಿ ಇಡಲು ಪೂರಕ ವಾತಾವರಣ ಸೃಷ್ಟಿಯಾಗಿದೆ. ಮುಂಗಾರು ಬಿತ್ತನೆಗೂ ಮುನ್ನ ಹೊಲ ಹಸನುಗೊಳಿಸುವ ಕಾಯಕವು ಆರಂಭಗೊಂಡಿದೆ.

ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಆಗಾಗ ಗುಡುಗು ಸಿಡಿಲು ಸಹಿತ ಮಳೆ ಬೀಳುತ್ತಿರುವುದರಿಂದ ನೆಲ ತಕ್ಕ ಮಟ್ಟಿಗೆ ತಂಪಾಗುತ್ತಿದೆ. ಮುಂಗಾರು ಬಿತ್ತನೆಗೂ ಮುನ್ನ ಗದ್ದೆಗಳನ್ನು ಸ್ವಚ್ಛಗೊಳಿಸುವ ಕೆಲಸ ತಾಲ್ಲೂಕಿನ ಇಂದೂರ, ಹುನಗುಂದ, ಕೊಪ್ಪ, ಕಾತೂರ ಸೇರಿದಂತೆ ಇನ್ನಿತರ ಕಡೆ ಭರದಿಂದ ಸಾಗಿದೆ.

ಮೋಡ ಕವಿದ ವಾತಾವರಣ ಹಾಗೂ ಆಗಾಗ ಬೀಳುತ್ತಿರುವ ಮಳೆ ಸಾಂಪ್ರದಾಯಿಕ ಕೃಷಿ ಮಾಡುವ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಹಸಿಯಾಗಿರುವ ಭೂಮಿಯನ್ನು ಯಂತ್ರೋಪಕರಣಗಳಿಂದ ಬಿತ್ತನೆಗೆ ಅಣಿಗೊಳಿಸುತ್ತಿದ್ದಾರೆ. ಸಾಂಪ್ರದಾಯಿಕ ಪದ್ಧತಿಯಂತೆ ಎತ್ತುಗಳೊಂದಿಗೆ ರಂಟೆ ಹೊಡೆಯುವುದು ಇನ್ನಷ್ಟೇ ಆರಂಭವಾಗಬೇಕಿದೆ. ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣನ್ನು ಹದಗೊಳಿಸುತ್ತ, ಕಾಳಿನ ಕಣಜ ತುಂಬಲು ಭರದಿಂದ ಪೂರ್ವ ತಯಾರಿ ನಡೆಸಿದ್ದಾರೆ.

ADVERTISEMENT

‘ಕಳೆದ ವರ್ಷ ಭತ್ತದ ಇಳುವರಿ ಉತ್ತಮವಾಗಿತ್ತು. ಆದರೆ ಉತ್ತಮ ಬೆಲೆ ಸಿಗಲಿಲ್ಲ. ಈ ವರ್ಷವೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ, ಭೂಮಿ ಹಸನುಗೊಳಿಸುವ ಕೆಲಸದಲ್ಲಿ ರೈತರು ತೊಡಗಿದ್ದಾರೆ. ಮಳೆಯಾಶ್ರಿತ ಭತ್ತ ಬೆಳೆಯುವ ರೈತರಿಗೆ ಇದು ಸಕಾಲವಾಗಿದ್ದು, ಒಂದೆರೆಡು ದೊಡ್ಡ ಮಳೆ ಬಿದ್ದರೆ, ಬಿತ್ತನೆ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುತ್ತಾರೆ’ ಎನ್ನುತ್ತಾರೆ ಕೃಷಿಕ ಶಿವಕುಮಾರ ಪಾಟೀಲ.

‘ಮುಂಗಾರು ಪೂರ್ವ ಮಳೆಯು ರೈತನ ಮೊಗದಲ್ಲಿ ಆಶಾದಾಯಕ ಭಾವ ಮೂಡಿಸುತ್ತಿದೆ. ಸಕಾಲದಲ್ಲಿ ಬಿತ್ತನೆ ಬೀಜಗಳು ದೊರೆತರೆ, ಒಂದು ಹಂತದ ಕೃಷಿ ಚಟುವಟಿಕೆಗೆ ವೇಗ ಸಿಕ್ಕಂತಾಗುತ್ತದೆ’ ಎಂದರು.

‘ಸಾಂಪ್ರದಾಯಿಕ ಕೃಷಿ ಪದ್ಧತಿ ಅಪರೂಪವಾಗುತ್ತಿದೆ. ಈಗ ಬಹುತೇಕ ರೈತರು ಟ್ರ್ಯಾಕ್ಟ‌ರ್ ಸಹಿತ ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎತ್ತುಗಳೊಂದಿಗೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ಹನಿ ಸುರಿಯುವುದು ರೈತರಿಗೆ ಖುಷಿ ನೀಡಿದೆ’ ಎಂದು ರೈತ ಬಾಬುರಾವ ವಾಲ್ಮೀಕಿ ಹೇಳಿದರು.

ಕಬ್ಬು ಬಿತ್ತನೆ ಕ್ಷೇತ್ರ

ಹೊಲ ಹದಗೊಳಿಸುವ ಕಾರ್ಯ ಈಗಷ್ಟೆ ಆರಂಭವಾಗಿದ್ದು ಬಿತ್ತನೆ ಬೀಜ ಸಂಗ್ರಹ ಮಾಡಲಾಗುತ್ತಿದೆ. ಸದ್ಯ ಗೋವಿನಜೋಳ ಪೂರೈಕೆಯಾಗಿದ್ದು ಇನ್ನರೆಡು ದಿನಗಳಲ್ಲಿ ಭತ್ತದ ಬೀಜಗಳು ಪೂರೈಕೆಯಗಲಿವೆ
ಕೃಷ್ಣಪ್ಪ ಮಹಾರೆಡ್ಡಿ ಸಹಾಯಕ ಕೃಷಿ ನಿರ್ದೇಶಕ
‘ಯಂತ್ರದತ್ತ ಚಿತ್ತ’
‘ಸಾಂಪ್ರದಾಯಿಕ ಕೃಷಿ ಪದ್ಧತಿ ಅಪರೂಪವಾಗುತ್ತಿದೆ. ಈಗ ಬಹುತೇಕ ರೈತರು ಟ್ರ್ಯಾಕ್ಟ‌ರ್ ಸಹಿತ ಯಂತ್ರೋಪಕರಣಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಎತ್ತುಗಳೊಂದಿಗೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ. ಈಗಾಗಲೇ ರೈತರು ಬಿತ್ತನೆ ಬೀಜಕ್ಕಾಗಿ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ, ವಿಚಾರಿಸುತ್ತಿದ್ದಾರೆ. ಒಂದು ವಾರದಿಂದ ಮೋಡ ಕವಿದ ವಾತಾವರಣ, ಆಗಾಗ ಹನಿ ಸುರಿಯುವುದು ರೈತರಿಗೆ ಖುಷಿ ನೀಡಿದೆ’ ಎಂದು ರೈತ ಬಾಬುರಾವ ವಾಲ್ಮೀಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.