ADVERTISEMENT

ಉತ್ತರ ಕನ್ನಡ | ವೃದ್ಧಿಯಾದ ಹಲಸಿನಕಾಯಿ ‘ಮೌಲ್ಯ’

ಶಿರಸಿ ಮಾರುಕಟ್ಟೆಯಲ್ಲೇ ವಾರ್ಷಿಕ ಕೋಟ್ಯಂತರ ವಹಿವಾಟು

ಗಣಪತಿ ಹೆಗಡೆ
Published 25 ಜೂನ್ 2022, 19:31 IST
Last Updated 25 ಜೂನ್ 2022, 19:31 IST
ಶಿರಸಿಯಲ್ಲಿ ಚಿಪ್ಸ್ ಸಿದ್ಧಪಡಿಸುವ ಸಲುವಾಗಿ ಹಲಸಿನಕಾಯಿಗಳನ್ನು ಸಂಸ್ಕರಿಸುತ್ತಿರುವುದು.
ಶಿರಸಿಯಲ್ಲಿ ಚಿಪ್ಸ್ ಸಿದ್ಧಪಡಿಸುವ ಸಲುವಾಗಿ ಹಲಸಿನಕಾಯಿಗಳನ್ನು ಸಂಸ್ಕರಿಸುತ್ತಿರುವುದು.   

ಶಿರಸಿ: ತೋಟದ ಅಂಚು, ಬೆಟ್ಟ ಪ್ರದೇಶದಲ್ಲಿ ಬೆಳೆದು ಅರ್ಧಕ್ಕರ್ಧ ಫಸಲು ಬಳಕೆಯಾಗದೆ ಹಾಳಾಗುತ್ತಿದ್ದ ಹಲಸಿನಕಾಯಿ ತನ್ನ ‘ಮೌಲ್ಯ’ ವೃದ್ಧಿಸಿಕೊಂಡಿದೆ. ನಗರದ ಮಾರುಕಟ್ಟೆಯಲ್ಲೇ ವಾರ್ಷಿಕವಾಗಿ ಕೋಟ್ಯಂತರ ಮೊತ್ತದ ವಹಿವಾಟು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಂದ ನಡೆಯುತ್ತಿದೆ.

ಇಲ್ಲಿನ ಕದಂಬ ಮಾರ್ಕೆಟಿಂಗ್, ಟಿಎಸ್ಎಸ್ ಸಂಸ್ಥೆಗಳು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಚಿಪ್ಸ್, ಹಪ್ಪಳ, ಹಲಸಿನ ಹಣ್ಣಿನ ಚಾಕೊಲೇಟ್ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಮಳಿಗೆಗಳು, ಗ್ರಾಮೀಣ ಭಾಗದ ಸಹಕಾರ ಸಂಸ್ಥೆಗಳಲ್ಲೀ ವಹಿವಾಟು ಹೆಚ್ಚುತ್ತಿದೆ.

ಮಾಹಿತಿ ಪ್ರಕಾರ ಶಿರಸಿ ನಗರದಲ್ಲೇ ವರ್ಷಕ್ಕೆ ₹5 ಕೋಟಿಗೂ ಹೆಚ್ಚು ಮೊತ್ತದ ಹಲಸಿನ ಉತ್ಪನ್ನದ ವಹಿವಾಟು ನಡೆಯುತ್ತಿದೆ. ಈ ಬೆಳವಣಿಗೆ ಕಳೆದ ಒಂದು ದಶಕದಿಂದ ಈಚೆಗೆ ಆರಂಭವಾಗಿದೆ ಎನ್ನುತ್ತಾರೆ ಕೃಷಿ ತಜ್ಞರು.

ADVERTISEMENT

‘2010ರಲ್ಲಿ ಮೊದಲ ಬಾರಿಗೆ ಕದಂಬ ಮಾರ್ಕೆಟಿಂಗ್ ಸಂಸ್ಥೆಯಿಂದ ಹಲಸಿನ ಮೇಳ ಆಯೋಜಿಸಿದ್ದು ಈ ಭಾಗದಲ್ಲಿ ಹಲಸಿನಕಾಯಿಗೆ ಪ್ರಾಮುಖ್ಯ ತಂದುಕೊಟ್ಟಿತು’ ಎನ್ನುತ್ತಾರೆ ಸಂಸ್ಥೆಯ ಪ್ರಮುಖ ವಿಶ್ವೇಶ್ವರ ಭಟ್.

‘ಬೇಸಿಗೆ ಅವಧಿಯಲ್ಲಿ ದೊರೆಯುವ ಹಲಸಿನಕಾಯಿಯನ್ನು ಹಪ್ಪಳ, ಚಿಪ್ಸ್ ತಯಾರಿಕೆಗೆ ಮಾತ್ರ ಬಳಸುವ ವಾಡಿಕೆ ಇತ್ತು. ಉತ್ಪನ್ನ ತಯಾರಿಕೆ ಹಳ್ಳಿಗಳಲ್ಲಿ ಮನೆ ಬಳಕೆಗೆ ಮಾತ್ರ ಸೀಮಿತವಾಗಿತ್ತು. ಪ್ರತಿ ಬಾರಿ ಮೇಳ ಆಯೋಜನೆಗೊಳ್ಳುತ್ತಿದ್ದ ಪರಿಣಾಮ ವಾಣಿಜ್ಯೀಕರಣದತ್ತ ಹಲಸನ್ನು ಕೊಂಡೊಯ್ಯುವ ಯೋಚನೆ ಮಾಡಿದರು. ಅದರ ಫಲವಾಗಿ ಹಲಸಿನ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಪರಿಚಿತವಾಗಿವೆ. ಪ್ರಸಕ್ತ ಸಾಲಿನಲ್ಲೇ ಸಂಸ್ಥೆಯಿಂದ ₹50 ಲಕ್ಷಕ್ಕೂ ಹೆಚ್ಚು ಮೌಲ್ಯದ ಉತ್ಪನ್ನ ಮಾರಾಟ ಕಂಡಿದೆ’ ಎಂದು ವಿವರಿಸಿದರು.

‘ಮನೆಯ ಸುತ್ತ ಇರುವ ಮೂರು ಮರಗಳ ಕಾಯಿಗಳಿಂದ ಮೊದಲು ಹಪ್ಪಳ, ಚಿಪ್ಸ್ ಸಿದ್ಧಪಡಿಸುತ್ತಿದ್ದೆವು. ಈಗ ಹಳ್ಳಿ ಸುತ್ತಾಡಿ ರೈತರಿಂದ ಕಾಯಿ ಖರೀದಿಸಿ, ಅವುಗಳಿಂದ ವಿವಿಧ ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದೇನೆ. ವರ್ಷಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಹಲಸಿನ ಹಪ್ಪಳ, ಮೂರು ಕ್ವಿಂಟಲ್‍ನಷ್ಟು ಚಿಪ್ಸ್ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಹಿತ್ಲಕಾರಗದ್ದೆ ಬಳಿಯ ಕಾಳೆಮನೆಯ ಶಂಕರ ಭಟ್ಟ.

‘ಮಳೆಗಾಲಕ್ಕೆ ಮನೆಗೆ ಬೇಕಾಗುವಷ್ಟು ಹಪ್ಪಳ ಸಿದ್ಧಪಡಿಸುತ್ತಿದ್ದ ಗ್ರಾಮದ ಮಹಿಳೆಯರು ಈಗ ಒಟ್ಟಾಗಿ ಸಾವಿರಾರು ಹಪ್ಪಳ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದೇವೆ. ಉತ್ತಮ ಆದಾಯವೂ ಸಿಗುತ್ತಿದೆ’ ಎಂದು ತುಡಗುಣಿಯ ಶಾರದಾ ಹೇಳಿದರು.

ಕೋಲ್ಕತ್ತಾಗೆ ರವಾನೆ:ಶಿರಸಿ ಭಾಗದ ಹಲಸಿನಕಾಯಿಗೆ ಹೊರಜಿಲ್ಲೆ, ಹೊರರಾಜ್ಯದಲ್ಲೂ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷದ ಮೇ ತಿಂಗಳಿನಲ್ಲಿ ಕದಂಬ ಸಂಸ್ಥೆ ಪಶ್ಚಿಮ ಬಂಗಾಳದ ಕೋಲ್ಕತ್ತಾಕ್ಕೆ ಮೂರು ಟನ್‍ನಷ್ಟು ಹಲಸಿನಕಾಯಿ ರವಾನಿಸಿತ್ತು.

‘ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ ಕಾಯಿಗಳನ್ನು ರವಾನಿಸಲಾಯಿತು. ಪ್ರತಿ ಕೆ.ಜಿಗೆ ₹35ಕ್ಕಿಂತ ಹೆಚ್ಚು ದರ ಲಭಿಸಿದ್ದವು. ಬೇಡಿಕೆ ಹೆಚ್ಚುತ್ತಿದ್ದು ಪೂರೈಕೆಗೆ ತಕ್ಕಷ್ಟು ಫಸಲು ಸಿಗಲಿಲ್ಲ’ ಎನ್ನುತ್ತಾರೆ ವಿಶ್ವೇಶ್ವರ ಭಟ್.

**

ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ವಹಿವಾಟು ಪ್ರಮಾಣ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಹೊರರಾಜ್ಯಕ್ಕೂ ಉತ್ಪನ್ನ ರವಾನೆಯಾಗುತ್ತಿದೆ.
-ವಿಶ್ವೇಶ್ವರ ಭಟ್,ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.