ADVERTISEMENT

ಕಾರವಾರ: ಜಿಲ್ಲೆಯ ಎಲ್ಲ ಜಲಾಶಯಗಳೂ ಸುರಕ್ಷಿತ

ಸೂಪಾದಿಂದ ನೀರು ಬಿಡುವ ಸಾಧ್ಯತೆ: ಕಾಳಿ ನದಿಪಾತ್ರದ 28 ಗ್ರಾಮಗಳ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 19:45 IST
Last Updated 8 ಆಗಸ್ಟ್ 2019, 19:45 IST
ಕದ್ರಾ ಭಾಗದ ಗ್ರಾಮಸ್ಥರನ್ನು ಕರೆದುಕೊಂಡು ಬರಲು ಗೋಟೆಗಾಳಿಯಲ್ಲಿ ಸಾಲಾಗಿ ನಿಂತಿದ್ದ ಬಸ್‌ಗಳು.
ಕದ್ರಾ ಭಾಗದ ಗ್ರಾಮಸ್ಥರನ್ನು ಕರೆದುಕೊಂಡು ಬರಲು ಗೋಟೆಗಾಳಿಯಲ್ಲಿ ಸಾಲಾಗಿ ನಿಂತಿದ್ದ ಬಸ್‌ಗಳು.   

ಕಾರವಾರ:‘ಜಿಲ್ಲೆಯ ಎಲ್ಲ ಅಣೆಕಟ್ಟೆಗಳೂ ಸುರಕ್ಷಿತವಾಗಿವೆ. ಸೂಪಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಶುಕ್ರವಾರ ಕಾಳಿ ನದಿಗೆ 30 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು.

ಕದ್ರಾ ಕೆಪಿಸಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕದ್ರಾ ಜಲಾಶಯದಲ್ಲಿ ಗುರುವಾರ1.80 ಲಕ್ಷ ಒಳಹರಿವು ಮತ್ತು 1.90 ಲಕ್ಷ ಹೊರಹರಿವು ದಾಖಲಾಗಿದೆ. ಅತ್ತ ಸೂಪಾ ಜಲಾಶಯದಿಂದ ಹೆಚ್ಚುವರಿಯಾಗಿ ನೀರನ್ನು ಹರಿಸಿದಾಗ ಕಾಳಿ ನದಿಯಲ್ಲಿ ನೀರಿನ ಮಟ್ಟ ಏರುತ್ತದೆ. ಹಾಗಾಗಿಮಲ್ಲಾಪುರ, ಕದ್ರಾ ಸೇರಿದಂತೆ ನದಿಪಾತ್ರದ 28 ಗ್ರಾಮಗಳ ಜನರನ್ನು ಶುಕ್ರವಾರದ ಒಳಗಾಗಿ ಸ್ಥಳಾಂತರಿಸಲಾಗುತ್ತದೆ. ಕಾರವಾರದ ಸಾಗರ ದರ್ಶನ ಸಭಾಂಗಣ ಮತ್ತು ಎ.ಸಿ. ಸಭಾಂಗಣದಲ್ಲಿ 1,000 ಜನರಿಗೆ ಆಶ್ರಯ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಭಟ್ಕಳ, ಶಿರಸಿ, ಯಲ್ಲಾಪುರ ತಾಲ್ಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟ್ಟದ ಮೇಲಿನ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಅಂಕೋಲಾ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ಪ್ರವಾಹ ಇಳಿಯಲು ಇನ್ನೂ ಎರಡು ದಿನಗಳು ಬೇಕಾಗಬಹುದು’ ಎಂದು ಅವರು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಮಾತನಾಡಿ, ‘ಗ್ರಾಮಸ್ಥರ ಸ್ಥಳಾಂತರಕ್ಕೆ ಆರ್‌ಟಿಒ ಮುಖಾಂತರ 50ಕ್ಕೂ ಹೆಚ್ಚುಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಸೂಪಾ ಜಲಾಶಯವು ಗರಿಷ್ಠ ಮಟ್ಟ ತಲುಪಲು ಸಮಯ ಬೇಕು. ಆದರೆ, ಒಳಹರಿವು ಮುಂದುವರಿಯುವ ಕಾರಣ ಹಂತಹಂತವಾಗಿ ಕಾಳಿ ನದಿಗೆ ನೀರು ಹರಿಸಲಾಗುವುದು. ಕೈಗಾದಲ್ಲಿ ಅವರದ್ದೇ ಆದ ಸುರಕ್ಷತಾ ಕ್ರಮಗಳಿವೆ. ಬೊಮ್ಮನಹಳ್ಳಿ ಸೇರಿದಂತೆ ಯಾವುದೇ ಅಣೆಕಟ್ಟೆಯಲ್ಲಿ ಏನೂ ಸಮಸ್ಯೆಯಿಲ್ಲ. ಕಾರವಾರ ಜಲಾವೃತವಾಗುವ ಸಾಧ್ಯತೆಯೂ ಇಲ್ಲ’ ಎಂದುಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ, ‘ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕರ ಮೂಲಕ 10 ಕ್ವಿಂಟಲ್ ಅಕ್ಕಿಯನ್ನು ಕಳುಹಿಸಲಾಗಿದೆ. ಬೇಳೆ, ಹಾಲಿನ ಪುಡಿ, ಬಿಸ್ಕತ್ ಪ್ಯಾಕೇಟ್‌ಗಳಿವೆ’ ಎಂದುಮಾಹಿತಿ ನೀಡಿದರು.

‘ಅಂಕೋಲಾ ತಾಲ್ಲೂಕಿನ ರಾಮನಗುಳಿಯಂತಹ ಪ್ರದೇಶಗಳಿಗೆ ದೋಣಿಯಲ್ಲೇ ಹೋಗಬೇಕು. ಅಲ್ಲಿರುವ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯ ನೀಡಲು ವೈದ್ಯರು ಹೋಗಲು ಸಿದ್ಧರಿದ್ದಾರೆ. ಈ ಸಂಬಂಧ ತಂಡವನ್ನು ರಚಿಸಲಾಗಿದೆ.ಅಲ್ಲಿ ಸದ್ಯ80 ವಾಹನ ಚಾಲಕರಿದ್ದಾರೆ. ಅಲ್ಲಿದ್ದ 300 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.