ADVERTISEMENT

ಶಿರಸಿ: ಬಸ್‌ಗೆ ಪರ್ಯಾಯ ವ್ಯವಸ್ಥೆ

ಯಲ್ಲಾಪುರ, ಮುಂಡಗೋಡ ಮಕ್ಕಳು ಭಯಪಡಬೇಕಾಗಿಲ್ಲ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 12:35 IST
Last Updated 23 ಜೂನ್ 2020, 12:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿರಸಿ: ಯಲ್ಲಾಪುರ ಸಾರಿಗೆ ಡಿಪೊದ ಒಬ್ಬರು ನಿರ್ವಾಹಕರಿಗೆ ಕೋವಿಡ್ 19 ದೃಢಪಟ್ಟಿರುವ ಕಾರಣ, ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಸಂಚರಿಸುವ ಬಸ್‌ಗಳಿಗೆ ಶಿರಸಿ ಹಾಗೂ ಅಂಕೋಲಾ ಡಿಪೊಗಳ ಚಾಲಕ, ನಿರ್ವಾಹಕರನ್ನು ಬಳಸಿಕೊಳ್ಳಲಾಗುತ್ತದೆ ಸಾರಿಗೆ ಸಂಸ್ಥೆ ಪ್ರಮುಖರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಅವರು, ಮಂಗಳವಾರ ಡಿಡಿಪಿಐ ದಿವಾಕರ ಶೆಟ್ಟಿ ಅವರನ್ನು ಭೇಟಿ ನೀಡಿ, ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಜೂನ್ 25ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಗೊಳಿಸುವಂತೆ ಶಿಕ್ಷಣ ಇಲಾಖೆ, ಸಾರಿಗೆ ಸಂಸ್ಥೆಯನ್ನು ವಿನಂತಿಸಿತ್ತು. ಆದರೆ, ಸೋಮವಾರ ಯಲ್ಲಾಪುರ ಡಿಪೊ ವ್ಯಾಪ್ತಿಯ ಒಬ್ಬರು ನಿರ್ವಾಹಕರಿಗೆ ಕೋವಿಡ್ 19 ಕಾಯಿಲೆ ದೃಢಪಟ್ಟಿದೆ. ಹೀಗಾಗಿ, ಯಲ್ಲಾಪುರ ತಾಲ್ಲೂಕಿನಲ್ಲಿ ಪರೀಕ್ಷೆಗೆ ಬಳಸುವ ಬಸ್‌ಗಳಿಗೆ ಅಂಕೋಲಾ ಘಟಕದ ಬಸ್‌ ನಿರ್ವಾಹಕರು, ಚಾಲಕರು, ಮುಂಡಗೋಡ ತಾಲ್ಲೂಕಿನಲ್ಲಿ ಶಿರಸಿ ಘಟಕದ ಚಾಲಕ, ನಿರ್ವಾಹಕರನ್ನು ಬಳಸಿಕೊಳ್ಳಲಾಗುವುದು. ಬಸ್‌ಗಳು ಯಾವುದೇ ಕಾರಣಕ್ಕೂ ಬಸ್ ನಿಲ್ದಾಣ ಪ್ರವೇಶಿಸುವುದಿಲ್ಲ. ಪಿಕ್‌ಅಪ್ ಸ್ಥಳದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ ಎಂದು ವಿವೇಕ ಹೆಗಡೆ ತಿಳಿಸಿದ್ದಾರೆ.

ADVERTISEMENT

ಎಲ್ಲ ಬಸ್‌ಗಳು ಸ್ಯಾನಿಟೈಸ್ ಆಗುತ್ತವೆ. ವಿದ್ಯಾರ್ಥಿಗಳು, ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ಡಿಡಿಪಿಐ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.