
ಶಿರಸಿ: ಮಕ್ಕಳಿಗೆ ಗುಣಮಟ್ಟದ ಆರಂಭಿಕ ಶಿಕ್ಷಣ ನೀಡಲು ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ಚಾಲನೆ ನೀಡಿದ ಬೆನ್ನಲ್ಲೇ ತಾಲ್ಲೂಕಿನ 33 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕ ತರಗತಿಗಳು ಆರಂಭಗೊಂಡಿವೆ.
ಖಾಸಗಿ ಕಾನ್ವೆಂಟ್ಗಳಂತೆ ಅಂಗನವಾಡಿಗಳಲ್ಲಿಯೂ ಎಲ್ಕೆಜಿ, ಯುಕೆಜಿಗಳ ತರಗತಿಗಳ ಮೂಲಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾಯೋಗಿಕ ತರಗತಿ ಆರಂಭವಾಗಿದೆ. ಅಂಗನವಾಡಿಗಳಿಗೆ ಪಠ್ಯ ಪುಸ್ತಕ, ಎಲ್ಇಡಿ ಟಿವಿಗಳನ್ನು ಸರಬರಾಜು ಮಾಡಲಾಗಿದೆ. ಇನ್ನು ಪೂರ್ವ ಪ್ರಾಥಮಿಕ ಹಂತ-1, ಹಂತ-2 ಎಂಬ ಪುಸ್ತಕಗಳು, ಅಡ್ಡ ಗೆರೆಗಳ ಪುಸ್ತಕ, ನೀತಿ ಕಥೆಯ ಪುಸ್ತಕಗಳು, ಬಣ್ಣ ತುಂಬುವ ಪುಸ್ತಕಗಳು, ರೈಮ್ಸ್ ಪುಸ್ತಕಗಳು, ಸಮವಸ್ತ್ರವನ್ನು ಮಕ್ಕಳಿಗೆ ನೀಡಲು ಸಿದ್ಧತೆ ನಡೆದಿದೆ.
‘ಆಟಿಕೆಗಳನ್ನು ನೀಡುವ ಜತೆ ಆಂಗ್ಲ ಭಾಷೆಯ ರೈಮ್ಸ್, ಕನ್ನಡ ಗೀತೆಗಳು, ಪದ್ಯಗಳು, ಡ್ರಾಯಿಂಗ್, ಅಡ್ಡ ಗೆರೆಗಳು, ಆಟ ಪಾಠ ಹೀಗೆ ಎಲ್ಲವನ್ನೂ ಮಕ್ಕಳಿಗೆ ಇಲ್ಲಿ ಹೇಳಿಕೊಡಲಾಗುತ್ತದೆ. ಚಟುವಟಿಕೆಗಳನ್ನು ನಡೆಸಲು ಶಾಲಾ ಪೂರ್ವ ಶಿಕ್ಷಣ ಕಿಟ್‍ನ್ನು ಇಲಾಖೆಯಿಂದ ನೀಡಲಾಗಿದೆ. ಅಲ್ಲದೆ, ಶಾಲೆಯಲ್ಲಿ ಊಟ, ಪಾಠ ಕಲ್ಪಿಸಲಾಗಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನಕ್ಕೆ ಅನ್ನ ಸಾರು, ಬಾಳೆಹಣ್ಣು, ಜತೆಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ನೀಡಲು ಸಿದ್ಧತೆ ನಡೆದಿದೆ. ಜತೆ, ಪೋಷಣ್ ವಾಟಿಕಾ ಯೋಜನೆಯಡಿ ಕಿಚನ್ ಗಾರ್ಡನ್ ನಿರ್ಮಿಸಲು ಕ್ರಮವಹಿಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂದಕುಮಾರ ಹೇಳಿದರು.
‘ಆಯ್ದ ಅಂಗನವಾಡಿ ಕೇಂದ್ರಗಳೊಳಗೆ ಮಕ್ಕಳಿಗೆ ಅವಶ್ಯಕ ಜ್ಞಾನ ತುಂಬುವ ಮಾಹಿತಿಯನ್ನು ಗೋಡೆಗಳ ಮೇಲೆ ಬರೆಸಲಾಗುತ್ತಿದೆ. ಮಕ್ಕಳಿಗೆ ಬೇಕಾಗುವ ಆಟಿಕೆ ನೀಡಲಾಗುತ್ತದೆ. ಎಲ್ಕೆಜಿ, ಯುಕೆಜಿ ಆರಂಭದ ಬೆನ್ನಲ್ಲೇ ಮಕ್ಕಳ ಆಗಮನದ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ’ ಎನ್ನುತ್ತಾರೆ ಅವರು.
‘ಕಾನ್ವೆಂಟ್ ರೀತಿ ಶೂ, ಬ್ಯಾಗ್ ನೀಡುವ ಜೊತೆಗೆ ಮಕ್ಕಳಿಗೆ ಕುಳಿತುಕೊಳ್ಳಲು ಪುಟ್ಟ ಡೆಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗನವಾಡಿ ಕೇಂದ್ರ ಗೊಂಬೆಗಳ ಚಿತ್ರಣ ಹೊಂದಿರಲಿದ್ದು, ಮಕ್ಕಳನ್ನು ಆಕರ್ಷಿಸುತ್ತದೆ’ ಎಂದರು.
‘ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡಲಾಗಿದೆ. ಮಕ್ಕಳ ಬೆಳವಣಿಗೆ ಹೇಗೆ ಮಾಡಬೇಕು, ಬರವಣಿಗೆ ಸುಧಾರಿಸುವುದು, ಅಡ್ಡ ಗೆರೆ ಬರೆಯುವುದು, ಅಭಿನಯ ಗೀತೆ, ಹಾಡು, ಆಟದ ಜತೆ ಪಾಠ, ಮಕ್ಕಳ ಕೈಯಿಂದ ಏನೆಲ್ಲಾ ಮಾಡಿಸಬೇಕು ಎಂದು ತರಬೇತಿ ಕೊಟ್ಟಿದ್ದಾರೆ’ ಎಂದು ಅಂಗನವಾಡಿ ಶಿಕ್ಷಕಿ ಸುನಂದಾ ತಿಳಿಸಿದರು.
3ರಿಂದ 6 ವರ್ಷದ ಮಕ್ಕಳಿಗೆ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಹೊಸ ವ್ಯವಸ್ಥೆಯಿಂದ ಸಾಧ್ಯನಂದಕುಮಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಯೋಜನೆ ಉದ್ದೇಶವೇನು?
‘ಖಾಸಗಿ ಶಾಲೆಗಳತ್ತ ಪೋಷಕರು ವಾಲುವುದನ್ನು ತಡೆಯುವುದು ಅವರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯದಂತೆ ನೋಡಿಕೊಳ್ಳುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಡ ಮಕ್ಕಳಿಗೆ ಲಭ್ಯವಾಗಿಸುವುದು ಯೋಜನೆ ಉದ್ದೇಶವಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.