ADVERTISEMENT

ಧಮ್ ಬಿರಿಯಾನಿಗೆ ‘ಅನ್ನಪೂರ್ಣ’; ಗೋಡಂಬಿ, ತುಪ್ಪದ ಘಮಲು

ರುಚಿಗೆ ಮಾರು ಹೋಗುವ ಗ್ರಾಹಕರು

ದೇವರಾಜ ನಾಯ್ಕ
Published 19 ಏಪ್ರಿಲ್ 2019, 19:45 IST
Last Updated 19 ಏಪ್ರಿಲ್ 2019, 19:45 IST
ಕಾರವಾರದ ಅನ್ನಪೂರ್ಣ ಬಿರಿಯಾನಿ ಪ್ಯಾರಡೈಸ್
ಕಾರವಾರದ ಅನ್ನಪೂರ್ಣ ಬಿರಿಯಾನಿ ಪ್ಯಾರಡೈಸ್   

ಕಾರವಾರ: ಮಾಂಸಾಹಾರ ಪ್ರಿಯರಿಗೆ ನಗರದಲ್ಲಿ ಹತ್ತಾರು ಹೋಟೆಲ್‌ಗಳು ಇವೆ. ಒಂದೊಂದು ಹೋಟೆಲ್‌ನಲ್ಲೂ ಒಂದೊಂದು ರುಚಿಯ ಖಾದ್ಯಗಳು ಸಿಗುತ್ತವೆ. ಆದರೆ, ಎಷ್ಟೇ ವರ್ಷ ಕಳೆದರೂ ರುಚಿ ಬದಲಿಸದ ಹೋಟೆಲ್‌ಗಳು ಮಾತ್ರ ಕೆಲವು. ಇಂಥ ಹೋಟೆಲ್‌ಗಳ ಸಾಲಿನಲ್ಲಿ ‘ಅನ್ನಪೂರ್ಣ ಬಿರಿಯಾನಿ ಪ್ಯಾರಡೈಸ್’ ಕೂಡ ಒಂದು.

ನಾಲಿಗೆಯ ರುಚಿ ಉಣಬಡಿಸುವಂಥ ಹತ್ತಾರು ಹೋಟೆಲ್‌ಗಳಿದ್ದರೂ, ನಗರದಲ್ಲಿ ಬಿರಿಯಾನಿ ಸವಿಯುವವರಿಗಾಗಿ ಹೇಳಿ ಮಾಡಿಸಿದಂತಿರುವ ಹೋಟೆಲ್ ಇದು. ಇಲ್ಲಿನ ಧಮ್ ಬಿರಿಯಾನಿಯ ರುಚಿ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಲೇ ಇರುತ್ತಾರೆ.

ರುಚಿ ಹೆಚ್ಚಿಸುವ ಗೋಡಂಬಿ:ಬಣ್ಣ ಬಣ್ಣದ ಅನ್ನದ ನಡುವೆ ಒಂದೆರಡು ಕೋಳಿಮಾಂಸದ ತುಂಡುಗಳನ್ನಿಟ್ಟು, ಅದನ್ನೇ ಬಿರಿಯಾನಿ ಎಂದು ನೀಡುವುದು ಎಲ್ಲೆಡೆ ಸರ್ವೇಸಾಮಾನ್ಯ. ಆದರೆ, ಅನ್ನಪೂರ್ಣದಲ್ಲಿ ನೀಡುವ ಬಿರಿಯಾನಿ ಇದಕ್ಕೆ ಭಿನ್ನ. ಬಣ್ಣಬಣ್ಣದ ಅನ್ನ, ಮೇಲ್ಭಾಗದಲ್ಲಿ ವಿಶೇಷವಾಗಿ ಗೋಡಂಬಿಯ ಪುಡಿಗಳನ್ನು ಉದುರಿಸಲಾಗುತ್ತದೆ. ಇದು ನಾಲಿಗೆಯ ರುಚಿ ಹೆಚ್ಚಿಸುತ್ತದೆ. ಜತೆಗೆ, ಅದರ ಮೇಲೆ ಸವರಿದ ಒಂದಿಷ್ಟು ತುಪ್ಪದ ವಾಸನೆ ಮೂಗಿಗೆ ಬಡಿಯುವುದರಿಂದ ಮತ್ತೆ ಮತ್ತೆ ಸವಿಯಬೇಕೆನ್ನುವ ಬಯಕೆ ಹೆಚ್ಚಾಗುತ್ತದೆ. ಇದರ ಜತೆಗೆ ನೀಡುವ ಗ್ರೀನ್ ಶಿರ್ವಾ ಬಿರಿಯಾನಿಯನ್ನು ಮತ್ತಷ್ಟು ರುಚಿಸುತ್ತದೆ.

ADVERTISEMENT

ಮಂಗಳೂರು ಸ್ಪೆಷಲ್: ಈ ಹೋಟೆಲ್‌ನ ಮಾಲೀಕ ವಿಜಯ್ ಶೆಟ್ಟಿ ಅವರ ಮೂಲ ಮಂಗಳೂರು. ಹೀಗಾಗಿ, ಇಲ್ಲಿ ವಿಶೇಷವಾಗಿ ಮಂಗಳೂರಿನ ಶೈಲಿಯ ಚಿಕನ್ ಪುಲಿಮುಂಚಿ, ಚಿಕನ್ ಸುಕ್ಕಾ ಕೂಡ ದೊರೆಯುತ್ತದೆ. ಇವೆರಡರ ಜತೆ ಅಕ್ಕಿ ರೋಟಿ ಸವಿದು ಮಾರು ಹೋಗದವರಿಲ್ಲ.

ಇಲ್ಲಿನ ಇನ್ನೂ ಹಲವಾರು ಖಾದ್ಯಗಳು ಗ್ರಾಹಕರಿಗೆ ಇಷ್ಟವಾಗುತ್ತದೆ. ಚಿಕನ್ ಮಸಾಲ, ಚಿಕನ್ ಕೊಲ್ಲಾಪುರಿ, ಬಟರ್ ಚಿಕನ್, ಚಿಕನ್ ಮುಘಲೈ, ಶಾಖಾಹಾರದಲ್ಲಿ ಆಲೂ ಗೋಬಿ ಮಸಾಲ, ದಾಲ್‌ಫ್ರೈ, ದಾಲ್ ಕೊಲ್ಲಾಪುರಿ ಕೂಡ ವಿಶೇಷ ರುಚಿ ಹೊಂದಿವೆ.

‘18 ವರ್ಷಗಳ ಅನುಭವ’:‘ನಗರದ ಹಳೆಯ ಮೀನುಮಾರುಕಟ್ಟೆಯ ಬಳಿ 18 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಅನ್ನಪೂರ್ಣ ಹೋಟೆಲ್’, ಒಂದು ವರ್ಷದ ಹಿಂದೆ ನಗರದ ಪಿಕಳೆ ರಸ್ತೆಯಲ್ಲಿ ‘ಅನ್ನಪೂರ್ಣ ಬಿರಿಯಾನಿ ಪ್ಯಾರಡೈಸ್’ ಎಂದು ಶುಭಾರಂಭಗೊಂಡಿತು. ಅಂದಿನಿಂದಲೂ ಮಾಂಸಾಹಾರದ ಅಡುಗೆಯಲ್ಲಿ ಅನುಭವ ಹೊಂದಿದವರಾಗಿರುವುದರಿಂದ, ಆ ರುಚಿ ಈವರೆಗೂ ನಮ್ಮಿಂದ ಮರೆಯಾಗಿಲ್ಲ’ ಎನ್ನುತ್ತಾರೆ ಹೋಟೆಲ್ ಮಾಲೀಕ ವಿಜಯ್ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.