ದಾಂಡೇಲಿ: ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ತೊಡಕಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೊಡುವಂತೆ ಶಾಸಕ ಆರ್. ವಿ ದೇಶಪಾಂಡೆ ಅವರಿಗೆ ಗುರುವಾರ ಜೋಯಿಡಾ-ದಾಂಡೇಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ ಲಿಖಿತ ಮನವಿಯನ್ನು ಶಾಸಕರ ಹಳಿಯಾಳದ ಸ್ವಗೃಹದಲ್ಲಿ ಸಲ್ಲಿಸಲಾಯಿತು.
ಹೋಂ ಸ್ಟೇ, ರೆಸಾರ್ಟ್‌ಗಳು ಸ್ಥಾಪನೆಗೊಂಡು ಸಾವಿರಾರು ಜನರಿಗೆ ಉದ್ಯೋಗದ ಆಸರೆಯನ್ನು ನೀಡಲಾಗಿದೆ. ಆದರೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ತಾಲ್ಲೂಕಿನಲ್ಲಿರುವ ಸೈಕ್ಸ್ ಪಾಯಿಂಟ್‌ಗಳನ್ನು ನೋಡಲು ಪ್ರವಾಸಿಗರಿಗೆ ಅವಕಾಶವನ್ನು ಮಾಡಿಕೊಡಬೇಕು. ಬಾಪೇಲಿಯ ಹಿನ್ನೀರಿನ ಪ್ರದೇಶದ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ದಾಂಡೇಲಿ ನಗರಕ್ಕೆ ಬರುವ ರಸ್ತೆಗಳಲ್ಲಿ ಸೈನ್ ಬೋರ್ಡ್‌ಗಳ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಾಗೋಡಾದಲ್ಲಿ ಸ್ಥಗಿತಗೊಂಡಿರುವ ದೋಣಿ ವಿಹಾರ ಮತ್ತು ಸಿದ್ದಬೆಟ್ಟ ಪಾಯಿಂಟ್ ವೀಕ್ಷಣೆಯನ್ನು ಮತ್ತೆ ಆರಂಭಿಸಬೇಕು. ದಾಂಡೇಲಿಯಿಂದ ಬೆಂಗಳೂರಿಗೆ ಐರಾವತ ಮತ್ತು ಅಂಬಾರಿ ಬಸ್ ಸಂಚಾರ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಗಮನ ನೀಡಬೇಕು.ಪ್ರವಾಸೋದ್ಯಮ ಆಕರ್ಷಣೆಗೆ ಆದ್ಯತೆಯಡಿ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಆರ್.ವಿ ದೇಶಪಾಂಡೆ, ಪ್ರವಾಸೋದ್ಯಮ ಬೆಳೆಯುತ್ತಿರುವುದು ಸಂತಸ ತಂದಿದೆ. ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ದಾಂಡೇಲಿ-ಜೋಯಿಡಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿಲ ಪಾಟೇಕರ, ಸಚಿನ್ ಕಾಮತ್, ಇಮಾಮ್ ಸರ್ವರ್, ಶಮಲ್, ಅಬ್ದುಲ್ಲಾ , ಉಸ್ಮಾನ್ ಶೇಖ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.