ADVERTISEMENT

ಅಡಿಕೆ ಬೆಳೆಗಾರರ ಪರ ಸಹಕಾರ ಸಂಘಗಳು

ಇಳುವರಿ ಕುಂಠಿತದಿಂದ ಕಂಗೆಟ್ಟ ಬೆಳೆಗಾರ: ನೆರವಿಗೆ ಧಾವಿಸಲು ಸರ್ಕಾರಕ್ಕೆ ಮನವಿ

ರಾಜೇಂದ್ರ ಹೆಗಡೆ
Published 16 ಜನವರಿ 2026, 7:31 IST
Last Updated 16 ಜನವರಿ 2026, 7:31 IST
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೊನೆ ಕೊಯ್ಲು ಮಾಡುತ್ತಿರುವ ಕಾರ್ಮಿಕ
ಶಿರಸಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೊನೆ ಕೊಯ್ಲು ಮಾಡುತ್ತಿರುವ ಕಾರ್ಮಿಕ   

ಶಿರಸಿ: ಸಾಮಾನ್ಯವಾಗಿ ಸಾಲ ವಸೂಲಾತಿಗಾಗಿ ರೈತರ ಮನೆ ಬಾಗಿಲಿಗೆ ಹೋಗುವ ಸಹಕಾರ ಸಂಘಗಳು ಇಂದು ಅಡಿಕೆ ಬೆಳೆಗಾರರ ದಯನೀಯ ಸ್ಥಿತಿಯನ್ನು ಕಂಡು ಅವರ ಪರವಾಗಿ ಸರ್ಕಾರದ ಮುಂದೆ ರಿಯಾಯಿತಿಗಾಗಿ ಮೊರೆ ಹೋಗುತ್ತಿರುವುದು ಅಡಿಕೆ ಕ್ಷೇತ್ರದಲ್ಲಿನ ಸಮಸ್ಯೆಯ ಗಂಭೀರತೆಗೆ ಹಿಡಿದ ಕೈಗನ್ನಡಿ.

ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಕೊನೆ ಕೊಯ್ಲಿನ ಸಂಭ್ರಮ ಮಾಯವಾಗಿದೆ. ಕಳೆದ ಮಳೆಗಾಲದಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಅಡಿಕೆ ತೋಟಗಳನ್ನು ವ್ಯಾಪಿಸಿಕೊಂಡ ಕೊಳೆ ರೋಗ ಹಾಗೂ ಅತ್ಯಂತ ವೇಗವಾಗಿ ಹರಡುತ್ತಿರುವ ಎಲೆಚುಕ್ಕಿ ರೋಗವು ಶೇ70ರಷ್ಟು ಫಸಲನ್ನು ನುಂಗಿ ಹಾಕಿದೆ. ಪರಿಣಾಮವಾಗಿ, ತಲೆತಲಾಂತರದಿಂದ ಅಡಿಕೆ ನಂಬಿ ಬದುಕುತ್ತಿದ್ದ ರೈತರು ಇಂದು ಇಳುವರಿ ಕುಸಿತದಿಂದ ಕಂಗಾಲಾಗಿದ್ದು, ಸಹಕಾರ  ಸಂಘ, ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡುವುದು ಹೇಗೆ ಎಂಬ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

‘ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಬಹುತೇಕ ಸಹಕಾರ ಸಂಘಗಳನ್ನೇ ಅವಲಂಬಿಸಿದ್ದಾರೆ. 80 ಸಾವಿರಕ್ಕೂ ಹೆಚ್ಚು ಅಡಿಕೆ ಬೆಳೆಗಾರರು ವಿವಿಧ ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಕೃಷಿ ನಿರ್ವಹಣೆ ಸಂಬಂಧ ವಿವಿಧ ಸಾಲಗಳನ್ನು ಮಾಡಿದ್ದಾರೆ. ಪ್ರಸ್ತುತ ಸಾಲ ಮರುಪಾವತಿ ದಿನಗಳು ಹತ್ತಿರವಾಗುತ್ತಿದ್ದು, ಕೈಯಲ್ಲಿ ಹಣವಿಲ್ಲವಾಗಿದೆ. ಅಡಿಕೆ ಬೆಳೆ ನಂಬಿ ಸಾಲ ಮಾಡಿದ್ದ ಕೃಷಿಕರು ಈ ಬಾರಿ ಇಳುವರಿ ತೀವ್ರ ಕುಸಿತಕ್ಕೆ ಬಲಿಯಾಗುವಂತಾಗಿದೆ. ಈ ನಿಟ್ಟಿನಲ್ಲಿ ರೈತರ ಈ ಅಸಹಾಯಕತೆ ನೀಗಿಸಲು ಸಹಕಾರ ಸಂಘಗಳ ಪ್ರಮುಖರು ಅಡಿಕೆ ಬೆಳೆಗಾರರ ಪರವಾಗಿ ಸರ್ಕಾರದ ಮುಂದೆ ರಿಯಾಯಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ADVERTISEMENT

‘ಇಲ್ಲಿಯವರೆಗೆ ಪಡೆದ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲವನ್ನು ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿರುವ ರೈತರಿಗೆ ಈ ಬಾರಿ ಸಂಕಷ್ಟ ಎದುರಾಗಿದೆ. ಕಳೆದ ವರ್ಷ 10 ಕ್ವಿಂಟಲ್ ಅಡಿಕೆ ಆದ ಬೆಳೆಗಾರನಿಗೆ ಈ ಬಾರಿ 3 ಕ್ವಿಂ. ಆಗುವುದೂ ಅನುಮಾನವಿದೆ. ಹೀಗಾಗಿ 2025-26ನೇ ಸಾಲಿನ ಕೆಸಿಸಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿಯೇ ಐದು ಕಂತುಗಳಲ್ಲಿ ಮರುಪಾವತಿ ಮಾಡಲು ವಿಶೇಷ ಅವಕಾಶ ಕಲ್ಪಿಸಬೇಕಿದೆ. ಅಷ್ಟೇ ಅಲ್ಲದೆ, ಕೃಷಿ ಮಾಧ್ಯಮಿಕ ಸಾಲದ ಕಂತನ್ನು ಮುಂದಿನ ವರ್ಷಕ್ಕೆ ಮುಂದೂಡಿ, ಅದರ ಬಡ್ಡಿಯನ್ನು ಸರ್ಕಾರವೇ ಭರಿಸುವ ಮೂಲಕ ರೈತರ ಮೇಲಿನ ಹೊರೆ ಇಳಿಸಬೇಕಿದೆ’ ಎನ್ನುತ್ತಾರೆ ಯಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೆಕೇರಿ. 

‘ತೋಟಗಳು ನಾಶವಾಗಿ ಇಳುವರಿ ಕುಸಿದಿರುವುದರಿಂದ ರೈತರಿಗೆ ದೈನಂದಿನ ಕೃಷಿ ಚಟುವಟಿಕೆಗಳಿಗೂ ಹಣದ ಕೊರತೆ ಎದುರಾಗಿದ್ದು, ವಾಡಿಕೆಯಂತೆ ಹಳೆಯ ಸಾಲ ಮರುಪಾವತಿ ಮಾಡಿದರೆ ಮಾತ್ರ ಹೊಸ ಕೆಸಿಸಿ ಸಾಲ ಮಂಜೂರು ಆಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಕಷ್ಟವಿದೆ. ಇದರ ಜತೆ, ಹವಾಮಾನ ಆಧರಿತ ಬೆಳೆ ವಿಮೆಯು ರೈತರ ಖಾತೆಗೆ ಇನ್ನೂ ಜಮೆಯಾಗಿಲ್ಲ’ ಎನ್ನುತ್ತಾರೆ ಶಿರಸಿಯ ಅಡಿಕೆ ಬೆಳೆಗಾರ ರಾಮಕೃಷ್ಣ ಭಟ್.

ಶೇ70ರಷ್ಟು ಅಡಿಕೆ ಇಳುವರಿ ಕುಸಿತ  ಕೆಸಿಸಿ ಸಾಲ ತೀರಿಸಲು 5 ಕಂತು ಬೇಡಿಕೆ ಕೃಷಿ ಮಾಧ್ಯಮಿಕ ಸಾಲ ಬಡ್ಡಿ ಸರ್ಕಾರ ಭರಿಸಲು ಆಗ್ರಹ

ಸಾಲ ಮರುಪಾವತಿ ಸಮಯ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಹತಾಶ ಸ್ಥಿತಿ ತಲುಪಿರುವ ಅಡಿಕೆ ಬೆಳೆಗಾರರ ನೆರವಿಗೆ ಸರ್ಕಾರ ಮುಂದಾಗಬೇಕು
ಜಿ.ಆರ್.ಹೆಗಡೆ ಬೆಳ್ಳೆಕೇರಿ ಯಡಳ್ಳಿ ಸಹಕಾರ ಸಂಘದ ಅಧ್ಯಕ್ಷ
ಅಡಿಕೆ ಇಳುವರಿ ಕುಸಿತದಿಂದ ಬೆಳೆಗಾರರ ಪ್ರಸಕ್ತ ವರ್ಷದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು
ಭೀಮಣ್ಣ ನಾಯ್ಕ ಶಾಸಕ

ಜನಪ್ರತಿನಿಧಿಗಳಿಗೆ ಮನವಿ

ಶಿರಸಿ ಸಿದ್ದಾಪುರ ಹಾಗೂ ಯಲ್ಲಾಪುರ ತಾಲ್ಲೂಕುಗಳ 25ಕ್ಕೂ ಹೆಚ್ಚು ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಿಯೋಗವು ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಹಾಗೂ ಸರ್ಕಾರ ಮಟ್ಟದಲ್ಲಿ ಸಹಕಾರ ಸಂಘಗಳ ಮನವಿ ಪ್ರಸ್ತಾಪಿಸಿ ತುರ್ತು ನೆರವು ಒದಗಿಸುವಂತೆ ಮನವಿ ಮಾಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.