ADVERTISEMENT

ಶಿರಸಿ: ಅಡಿಕೆ ಕೃಷಿಗೆ ‘ಜಲ ಸಂಕಷ್ಟ’

ಸಾಂಪ್ರದಾಯಿಕ ಕ್ಷೇತ್ರವಲ್ಲದ ಪ್ರದೇಶದಲ್ಲಿ ತಲೆ ಎತ್ತಿದ್ದ ತೋಟಗಳು: ನೀರಿಲ್ಲದೆ ಪರದಾಟ

ರಾಜೇಂದ್ರ ಹೆಗಡೆ
Published 26 ನವೆಂಬರ್ 2023, 6:20 IST
Last Updated 26 ನವೆಂಬರ್ 2023, 6:20 IST
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನೀರಿನ ಕೊರತೆಯಿಂದ ಬಳಲುತ್ತಿರುವ ಅಡಿಕೆ ತೋಟ
ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನೀರಿನ ಕೊರತೆಯಿಂದ ಬಳಲುತ್ತಿರುವ ಅಡಿಕೆ ತೋಟ   

ಶಿರಸಿ: ಮಳೆ ಆಶ್ರಯಿಸಿ ಬೆಳೆ ಬೆಳೆಯುವ ಅಸಾಂಪ್ರದಾಯಿಕ ನೀರಾವರಿ ಕ್ಷೇತ್ರದಲ್ಲಿ ಅಡಿಕೆ ಕೃಷಿ ಕೈಗೊಂಡ ಹಲವು ಕೃಷಿಕರು ಪ್ರಸ್ತುತ ಎದುರಾದ ತೀವ್ರ ನೀರಿನ ಕೊರತೆಗೆ ಹೈರಾಣಾಗಿದ್ದಾರೆ.

ಕಳೆದ ನಾಲ್ಕೈದು ವರ್ಷ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯತ್ತ ರೈತರು ಹೆಚ್ಚಿನ ಚಿತ್ತ ಹರಿಸಿದ್ದರು. ಇದರಿಂದ ನೀರಾವರಿ ಭೂಮಿ ಸಹ ಅಧಿಕವಾಗಿದೆ. ಆದರೆ ಈ ಬಾರಿ ಮುಂಗಾರು ವಿಫಲವಾಗಿದೆ. ಇದು ತೋಟಗಾರರಿಗೆ ಸಮಸ್ಯೆ ತಂದೊಡ್ಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 33 ಸಾವಿರ ಹೆಕ್ಟೇರಗಿಂತ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಬಹುತೇಕ ಕುಟುಂಬಗಳಿಗೆ ಅಡಿಕೆ ಉತ್ಪನ್ನದಿಂದ ಬರುವ ಆದಾಯವೇ ಜೀವನಾಧಾರವಾಗಿದೆ.

ಈಚಿನ ವರ್ಷಗಳಲ್ಲಿ ಅಡಿಕೆಗೆ ಲಭ್ಯವಾಗುತ್ತಿರುವ ಉತ್ತಮ ದರದ ಕಾರಣ ಅಸಾಂಪ್ರದಾಯಿಕ ಪ್ರದೇಶದಲ್ಲೂ ಅಡಿಕೆ ಕ್ಷೇತ್ರ ವ್ಯಾಪಕವಾಗಿ ವಿಸ್ತಾರಗೊಂಡಿದೆ. ಸ್ವಾಭಾವಿಕ ನೀರಾವರಿ ಕ್ಷೇತ್ರದಿಂದ ಹೊರಗುಳಿದ ಪ್ರದೇಶಗಳು ಸಾವಿರಾರು ಹೆಕ್ಟೇರ್ ಅಡಿಕೆ ತೋಟವಾಗಿ ಮಾರ್ಪಟ್ಟಿವೆ. ಪ್ರಸಕ್ತ ವರ್ಷ ಮಳೆ ಕೊರತೆ, ಬರಗಾಲದ ಸನ್ನಿವೇಶ ಎದುರಾದ ಕಾರಣ ಇಂಥ ಪ್ರದೇಶದ ತೋಟಿಗರು ಸಂಕಷ್ಟ ಎದುರಿಸುವಂತಾಗಿದೆ.

ADVERTISEMENT

ಜಿಲ್ಲೆಯ ಬನವಾಸಿ ಹೋಬಳಿ, ಮುಂಡಗೋಡ, ಹಳಿಯಾಳ ಭಾಗದ ಮಳೆಯಾಶ್ರಿತ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ 800 ಹೆಕ್ಟೇರಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ತೋಟಗಳು ತಲೆ ಎತ್ತಿವೆ. ಭತ್ತ, ಶುಂಠಿ, ಅನಾನಸ್, ಮೆಕ್ಕೆಜೋಳ ಬೆಳೆಯುವ ಜಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವರದಾ ನದಿ, ಧರ್ಮಾ, ಚಿಗಳ್ಳಿ ಭಾಗದ ಜಲಮೂಲಗಳೇ ಈ ತೋಟಗಳಿಗೆ ಆಧಾರವಾಗಿದ್ದವು. ಆದರೆ ಸಕಾಲಕ್ಕೆ ಮಳೆ ಬಾರದ ಕಾರಣ ತಾಪಮಾನ ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿರೀಕ್ಷೆಗೂ ಮೀರಿದ ಧಗೆ ಆವರಿಸಿಕೊಂಡಿದೆ.

‘ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಅಧಿಕ ಉಷ್ಣಾಂಶ ವಾತಾವರಣದಲ್ಲಿ ದಾಖಲಾಗಿದ್ದು, ಅಡಿಕೆ ಮರಗಳಿಗೆ ಮಾರಕವಾಗಿದೆ. ಕುಡಿಯುವ ನೀರಿಗೂ ಹುಡುಕಾಡುವ ಸ್ಥಿತಿ ಬಂದೊದಗಿದೆ. ಹೀಗಾಗಿ ಅಡಿಕೆಗೆ ಬೇಕಾದಷ್ಟು ನೀರು ಪೂರೈಕೆ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಅಡಿಕೆ ಮರಗಳು ಸಾಯುವ ಹಂತ ತಲುಪುತ್ತಿವೆ’ ಎನ್ನುತ್ತಾರೆ ರೈತ ಸಂತೋಷ ನಾಯ್ಕ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರು ಸಹ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ಹಾಯಿಸಲು ಬೆಳೆಗಾರರು ಯೋಚಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ತೋಟಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ’ ಎಂದು ಬನವಾಸಿ ಹೋಬಳಿಯ ಬಹುತೇಕ ಅಡಿಕೆ ಬೆಳೆಗಾರರು ಆತಂಕದಿಂದಲೇ ಹೇಳುತ್ತಾರೆ.

ಮಳೆ ಕೊರೆತಯಿಂದ ಅಂತರ್ಜಲ ಕುಸಿಯುತ್ತಿದ್ದು ನೀರಿಲ್ಲದೆ ಅಡಿಕೆ ತೋಟಗಳು ಒಣಗುತ್ತಿವೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ವಿತರಣೆಯಲ್ಲಿ ಆಗುತ್ತಿರುವ ಲೋಪ ಸಹ ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಲಕ್ಷಣಗಳಿವೆ.
-ಶೇಖರ ಗೌಡ, ಬನವಾಸಿ ಅಡಿಕೆ ಬೆಳೆಗಾರ
ಅಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಅಡಿಕೆ ವಿಸ್ತರಣೆ ಆಗಿದ್ದು ಈ ಸಮಸ್ಯೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಅಡಿಕೆ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇಲ್ಲ.
ಸತೀಶ ಹೆಗಡೆ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.