
ಕಾರವಾರ: ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾಗಿರುವ ಅಡಿಕೆ ಬೆಳೆಗೆ ಆವರಿಸಿದ ಎಲೆಚುಕ್ಕಿ ರೋಗ ಕೃಷಿಕರನ್ನು ಹೈರಾಣಾಗಿಸಿದೆ. ಇಳುವರಿ ಕುಸಿತ, ನಾಶವಾಗುತ್ತಿರುವ ತೋಟದಿಂದ ಜೀವನ ನಿರ್ವಹಣೆಗೆ ದಾರಿ ಏನು? ಎಂಬುದರ ಚಿಂತೆಯಲ್ಲಿ ರೈತರಿದ್ದಾರೆ. ರಾಜ್ಯ ಬಜೆಟ್‌ನಲ್ಲಿ ನೆರವು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅವುಗಳ ಪೈಕಿ ಈವರೆಗೆ ತೋಟಗಾರಿಕೆ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ 11,803 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶ ರೋಗಬಾಧೆಗೆ ತುತ್ತಾಗಿದೆ. ಸಮೀಕ್ಷೆ ಇನ್ನೂ ನಡೆಯುತ್ತಿದ್ದು, ಪ್ರಮಾಣ ಮತ್ತಷ್ಟು ಏರಿಕೆಯಾಗಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ಅಡಿಕೆ ಕೊಯ್ಲು ಮುಗಿಯುವ ಹಂತದಲ್ಲಿದ್ದು, ಈ ಹಿಂದಿಗಿಂತ ಫಸಲಿನ ಪ್ರಮಾಣ ಶೇ 60ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆಯತ್ತ ಅಡಿಕೆ ಆವಕವೂ ಕಡಿಮೆಯಾಗಿದೆ. ಅಡಿಕೆಯನ್ನೇ ನಂಬಿದವರು ಆರ್ಥಿಕ ಹೊಡೆತ ಎದುರಿಸುವ ಆತಂಕದಲ್ಲಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಬೆಳೆಗಾರರಿಗೆ ನೆರವಾಗಬೇಕು ಎಂಬುದು ರೈತರ ಒತ್ತಾಯ.
‘ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿರುವ ಜೊತೆಗೆ ಫಸಲು ಕುಂಠಿತವಾಗುತ್ತಿದೆ. ರೋಗ ಹತೋಟಿಗೆ ಬರದೆ ತೋಟ ಹಾಳಾಗುವ ಆತಂಕವಿದೆ. ಭವಿಷ್ಯದಲ್ಲಿ ಫಸಲು ತೀರಾ ಇಳಿಮುಖವಾಗುವ ಸಾಧ್ಯತೆ ಅಲ್ಲಗಳೆಯಲಾಗದು. ಸರ್ಕಾರ ಕೂಡಲೆ ಎಲೆಚುಕ್ಕಿ ರೋಗ ಬಾಧಿತ ರೈತರ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಲು ಬಜೆಟ್‌ನಲ್ಲಿ ಯೋಜನೆ ಘೋಷಿಸಲಿ’ ಎನ್ನುತ್ತಾರೆ ಶಿರಸಿಯ ದಿ ತೋಟಗಾರ್ಸ್ ಸಹಕಾರ ಸೇಲ್ಸ್ ಸೊಸೈಟಿಯ (ಟಿಎಸ್‌ಎಸ್) ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.
‘ಸಹಕಾರರ ಸಂಘಗಳನ್ನೇ ನಂಬಿಕೊಂಡು ಅಡಿಕೆ ಬೆಳೆಗಾರರಿದ್ದಾರೆ. ಕೃಷಿ ನಿರ್ವಹಣೆ ಚಟುವಟಿಕೆಗೆ ಸಾಲಗಳನ್ನು ಮಾಡಿದ್ದಾರೆ. ಸಾಲ ಮರುಪಾವತಿ ದಿನಗಳು ಹತ್ತಿರವಾಗುತ್ತಿದ್ದು, ಫಸಲು ಇಳಿಕೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಸಾಲ ಮರುಪಾವತಿ ಅವಧಿಗೆ ರಿಯಾಯಿತಿ ನೀಡುವ ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿಯೇ ಐದು ಕಂತುಗಳಲ್ಲಿ ಮರುಪಾವತಿ ಮಾಡಲು ವಿಶೇಷ ಅವಕಾಶ ಕಲ್ಪಿಸಬೇಕು. ಕೃಷಿ ಮಾಧ್ಯಮಿಕ ಸಾಲದ ಕಂತನ್ನು ಮುಂದಿನ ವರ್ಷಕ್ಕೆ ಮುಂದೂಡಿ, ಅದರ ಬಡ್ಡಿಯನ್ನು ಸರ್ಕಾರವೇ ಭರಿಸುವ ವ್ಯವಸ್ಥೆಯಾಗಬೇಕು’ ಎಂಬುದು ಅವರ ಒತ್ತಾಯ.
ಮಳೆ ಮಾಪನ ಕೇಂದ್ರಗಳ ದುಸ್ಥಿತಿಯಿಂದ ಜಿಲ್ಲೆಯ ರೈತರು ವರ್ಷಕ್ಕೆ ₹70–80 ಕೋಟಿಯಷ್ಟು ಬೆಳೆವಿಮೆ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಪ್ರತಿ ಗ್ರಾಮಕ್ಕೊಂದು ಡಿಜಿಟಲ್ ಮಳೆ ಮಾಪನ ಯಂತ್ರ ಅಳವಡಿಕೆ ಘೋಷಿಸಲಿಗೋಪಾಲಕೃಷ್ಣ ವೈದ್ಯ ಟಿಎಸ್ಎಸ್ ಅಧ್ಯಕ್ಷ
ವಿಶೇಷ ಪ್ಯಾಕೇಜ್ ಅಗತ್ಯ
‘ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಅಡಿಕೆ ಜೊತೆಗೆ ಶುಂಠಿ ಮೆಕ್ಕೆಜೋಳ ಅನಾನಸ್ ಬೆಳೆಗಳಿಗೂ ಕೊಳೆರೋಗ ಬಾಧಿಸಿದೆ. ನಿರೀಕ್ಷೆಗಿಂತ ಅರ್ಧದಷ್ಟು ಇಳುವರಿಯನ್ನೂ ಪಡೆಯಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಅತಿವೃಷ್ಟಿಗೆ ತುತ್ತಾಗುವ ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಬಜೆಟ್‌ನಲ್ಲಿ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಅಡಿಕೆ ಸೇರಿದಂತೆ ಇತರ ಬೆಳೆಗಳು ಕೊಳೆರೋಗಕ್ಕೆ ತುತ್ತಾದರೆ ಪರಿಹಾರ ನೀಡಲು ಯೋಜನೆ ಘೋಷಿಸಲಿ’ ಎಂದು ಹಸಿರು ಸೇನೆ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.