ADVERTISEMENT

ಅಪಾಯದಲ್ಲಿ ಜಾಜಿಗುಡ್ಡದ ಬೆಟ್ಟ

ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 13:14 IST
Last Updated 14 ಆಗಸ್ಟ್ 2020, 13:14 IST
ಶಿರಸಿ ತಾಲ್ಲೂಕಿನ ಜಾಜಿಗುಡ್ಡೆಯ ನಿವಾಸಿಗಳೊಂದಿಗೆ ಅನಂತ ಅಶೀಸರ ಚರ್ಚಿಸಿದರು
ಶಿರಸಿ ತಾಲ್ಲೂಕಿನ ಜಾಜಿಗುಡ್ಡೆಯ ನಿವಾಸಿಗಳೊಂದಿಗೆ ಅನಂತ ಅಶೀಸರ ಚರ್ಚಿಸಿದರು   

ಶಿರಸಿ: ತಾಲ್ಲೂಕಿನ ವಾನಳ್ಳಿ ಸಮೀಪದ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಜಿಗುಡ್ಡೆಯ ಭೂ ಕುಸಿತ ಪ್ರದೇಶಕ್ಕೆ ಶುಕ್ರವಾರ ಭೂ ಕುರಿತು ಅಧ್ಯಯನ ಸಮಿತಿ ಅಧ್ಯಕ್ಷರೂ ಆಗಿರುವ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಭೇಟಿ ನೀಡಿದರು.

ಸ್ಥಳ ಪರಿಶೀಲನೆ ನಡೆಸಿದ ಅವರು, ಅಧಿಕಾರಿ, ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದರು. ‘ಎರಡು ಕಿ.ಮೀ ಉದ್ದದ ಬೆಟ್ಟ ಬಿರಿದು ನಿಂತಿದೆ. ಬೆಟ್ಟದ ಕೆಳಭಾಗದಲ್ಲಿ ಹತ್ತು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಜಾಜಿಗುಡ್ಡೆಯಲ್ಲಿರುವ ಮನೆಗಳಿಗೆ ಅಪಾಯವಾಗಬಹುದಾದ ಗಂಭೀರ ಪರಿಸ್ಥಿತಿ ಇದೆ. ಇಲ್ಲಿರುವ ಒಂಬತ್ತು ಕುಟುಂಬಗಳ 48 ಜನರು ಸ್ಥಳಾಂತರಗೊಳ್ಳಬೇಕು ಎಂದು ಅನಂತ ಅಶೀಸರ ಹಾಗು ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ವಿನಂತಿಸಿದರು.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿರುವ ವಿಚಾರವನ್ನು ಅಶೀಸರ ತಿಳಿಸಿದರು. ಜಾಜಿಗುಡ್ಡೆಯ 92 ವರ್ಷದ ಹಿರಿಯೆ ಗಣಪಿ ಹೆಗಡೆ ಅವರ ಮನವೊಲಿಸಿದ ಅವರು, ಸ್ಥಳಾಂತರಗೊಳ್ಳುವಂತೆ ಕೋರಿದರು. ಜಿಲ್ಲಾ ಭೂ ವಿಜ್ಞಾನ ಅಧಿಕಾರಿಗಳು ಸಹ ಇಲ್ಲಿ ಅಪಾಯವಿರುವುದಾಗಿ ತಿಳಿಸಿದರು.

ADVERTISEMENT

ಜಾಜಿಗುಡ್ಡೆಯಿಂದ ಒಂದು ಕಿ.ಮೀ ದೂರದ ಸಮತಟ್ಟು ಪ್ರದೇಶದಲ್ಲಿರುವ ಬೆಟ್ಟಭೂಮಿಯಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಸಭೆ ನಿರ್ಧರಿಸಿತು. ‘ಒಂದು ವರ್ಷದ ಹಿಂದೆಯೇ ಭೂ ಕುಸಿತವಾಗಿತ್ತು. ಆದರೆ, ಪುನರ್ವಸತಿಗೆ ಭೂಮಿ ದೊರೆತಿರಲಿಲ್ಲ. ಈಗ ಪುನಃ ಭೂ ಕುಸಿತವಾಗುತ್ತಿದೆ’ ಎಂದು ಸ್ಥಳೀಯ ಪಿ.ಜಿ.ಹೆಗಡೆ ಹೇಳಿದರು.

ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಆದೇಶ ಪಡೆದು, ಶೀಘ್ರದಲ್ಲಿ ಪುನರ್ವಸತಿ ಕಲ್ಪಿಸಬೇಕು. ಸರ್ಕಾರ ನೀಡಬೇಕಾಗಿರುವ ಆರ್ಥಿಕ ಸೌಲಭ್ಯ, ಒಪ್ಪಿಗೆ ಪತ್ರ ನೀಡಲು ಅಶೀಸರ, ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಯಶೋದಾ, ಗಣಿ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಸೋಮಶೇಖರ, ಅರಣ್ಯ ಅಧಿಕಾರಿಗಳಾದ ರಘು, ಬಸವರಾಜ್, ಉಪತಹಶೀಲ್ದಾರರಾದ ರಮೇಶ ಹೆಗಡೆ, ಡಿ.ಆರ್.ಬೆಳ್ಳಿಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.