ADVERTISEMENT

ಪಡಿತರ ಒಯ್ಯಲು ಆಟೊರಿಕ್ಷಾ: ಜನರಿಗೆ ನೆರವಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 12:30 IST
Last Updated 9 ಏಪ್ರಿಲ್ 2020, 12:30 IST
ಪಡಿತರ ಅಂಗಡಿ ಎದುರು ನಿಲ್ಲುವ ರಿಕ್ಷಾ
ಪಡಿತರ ಅಂಗಡಿ ಎದುರು ನಿಲ್ಲುವ ರಿಕ್ಷಾ   

ಶಿರಸಿ: ಎರಡು ತಿಂಗಳುಗಳ ಪಡಿತರವನ್ನು ಒಮ್ಮೆಲೇ ಹೊತ್ತುಕೊಂಡು ಹೋಗಲು ಸಂಕಟಪಡುತ್ತಿದ್ದ ಬಿಪಿಎಲ್ ಕಾರ್ಡುದಾರರಿಗೆ ಪೊಲೀಸರು ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಬಗ್ಗೆ ವಿಶೇಷ ಮುತುವರ್ಜಿವಹಿಸಿದ ಮಾರ್ಕೆಟ್ ಯಾರ್ಡ್ ಪಿಎಸ್‌ಐ ನಾಗಪ್ಪ ಬಿ ಅವರು, ಇದೇ ಉದ್ದೇಶಕ್ಕಾಗಿ ಆರು ಆಟೊರಿಕ್ಷಾ ಸಂಚಾರಕ್ಕೆ ಅನುಮತಿ ಒದಗಿಸಿದ್ದಾರೆ. ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ, ಜನರು ಮನೆಯಿಂದ ಹೆಚ್ಚು ಹೊರಬೀಳಬಾರದೆಂಬ ಉದ್ದೇಶದಿಂದ ಎರಡು ತಿಂಗಳುಗಳ ಪಡಿತರವನ್ನು ಒಟ್ಟಿಗೆ ವಿತರಿಸುತ್ತಿದೆ.

ಪಡಿತರ ಅಂಗಡಿಗೆ ಬರುವ ಕಾರ್ಡುದಾರರು ಭಾರವಾದ ಅಕ್ಕಿಚೀಲವನ್ನು ಹೊರಲು ಸಾಧ್ಯವಾಗದೇ ಸಂಕಟಪಡುತ್ತಿದ್ದರು. ಇದನ್ನು ಗಮನಿಸಿದ ನಾಗಪ್ಪ ಬಿ ಅವರು, ಮಾರುಕಟ್ಟೆ ಠಾಣೆ ವ್ಯಾಪ್ತಿಯ ಆರು ರೇಷನ್‌ ಅಂಗಡಿಗಳ ಎದುರು, ಆರು ರಿಕ್ಷಾ ವ್ಯವಸ್ಥೆಗೊಳಿಸಿದ್ದಾರೆ. ರೇಷನ್ ಪಡೆಯುವವರು ಈ ಆಟೊರಿಕ್ಷಾಕ್ಕೆ ಕನಿಷ್ಠ ಬಾಡಿಗೆ ನೀಡಿ, ಮನೆ ತಲುಪಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಅನುಮತಿಯಿಲ್ಲದೇ ಇಂಧನ ನೀಡುವುದಿಲ್ಲ. ಹೀಗಾಗಿ, ಇದಕ್ಕೂ ಪೊಲೀಸರೇ ಮುಂದಾಗಿ ಇಂಧನ ವ್ಯವಸ್ಥೆಗೊಳಿಸಿದ್ದಾರೆ.

ADVERTISEMENT

‘ಮನೆಯಿಂದ ಬೈಕ್‌ ಮೇಲೆ ಬಂದು ಪಡಿತರ ಒಯ್ಯುತ್ತಿದ್ದೆವು. ಆದರೆ ಈಗ ವಾಹನವನ್ನು ಹೊರಗೆ ತೆಗೆಯುವಂತಿಲ್ಲ. ಹೆಚ್ಚು ಜನರೂ ಮನೆಯಿಂದ ಹೊರಬರುವಂತಿಲ್ಲ.ಪಡಿತರ ಅಕ್ಕಿಯನ್ನು ಹೊತ್ತುಕೊಂಡು ಹೋಗಲು ಕಷ್ಟವಾಗುತ್ತಿತ್ತು. ನಿಧಾನ ಹೆಜ್ಜೆ ಹಾಕುತ್ತ, ದಾರಿಯಲ್ಲಿ ಇಡುತ್ತ ಮುಂದೆ ಹೋಗಬೇಕಾಗಿತ್ತು. ಈಗ ನಮ್ಮ ಕಷ್ಟ ತಪ್ಪಿದೆ. ರಿಕ್ಷಾ ಇದ್ದಿದ್ದು ಅನುಕೂಲವಾಯಿತು’ ರೇಷನ್ ಪಡೆಯಲು ಬಂದಿದ್ದ ಸುಮಿತ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.