
ಶಿರಸಿ: ‘ವಿಚ್ಛೇದನ ಹಾಗೂ ಭ್ರೂಣ ಹತ್ಯೆಯಿಂದ ದೂರ ಉಳಿದು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಪೋಷಕರಿಂದ ಆದರೆ ಭವಿಷ್ಯದ ಸಮಾಜ ಗಟ್ಟಿಗೊಳ್ಳುತ್ತದೆ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಗ್ರಾಮಾಭ್ಯುದಯ ಸಂಸ್ಥೆ, ಮಾರಿಕಾಂಬಾ ದೇವಾಲಯಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸರ್ವದಂಪತಿ ಶಿಬಿರದ ಸಮಾರೋಪದ ಸಾನ್ನಿಧ್ಯವಹಿಸಿ ಆಶೀರ್ವದಿಸಿದರು.
‘ಸಂಸಾರದಲ್ಲಿ ಹೊಂದಾಣಿಕೆ ಅತ್ಯಗತ್ಯ. ಆದರೆ ಇತ್ತೀಚೆಗೆ ವಿವೇಚನಾರಹಿತ ಆಲೋಚನೆಯ ಫಲವಾಗಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಮಾಜದ ಮೌಲ್ಯಗಳ ಕುಸಿತದ ಸಂಕೇತವಾಗಿದೆ. ಕಾರಣ ದಂಪತಿ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ವಿಚ್ಛೇದನ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿರು.
‘ದಂಪತಿ ಭ್ರೂಣ ಹತ್ಯೆ ಚಿಂತನೆಯಿಂದ ದೂರವಿಡುವ ಉದ್ದೇಶದಿಂದಲೇ ಸರ್ವದಂಪತಿ ಶಿಬಿರವನ್ನು ಆರಂಭ ಮಾಡಲಾಗಿದೆ. ಪ್ರತ್ಯಕ್ಷ ಮನುಷ್ಯನನ್ನು ಕೊಲೆ ಮಾಡಿದ್ದಕ್ಕಿಂತ ಹೆಚ್ಚಿನ ದೋಷ ಭ್ರೂಣ ಹತ್ಯೆಯಿಂದ ಬರುತ್ತದೆ. ಕಾನೂನಿನಲ್ಲಿಯೂ ಸಹ ಇದಕ್ಕೆ ವಿರೋಧವಿದೆ’ ಎಂದ ಶ್ರೀಗಳು, ಅತಿಯಾಗಿ ಗರ್ಭನಿರೋಧಕ ಮಾತ್ರೆ ಸೇವನೆಯಂಥ ಪರೋಕ್ಷ ಭ್ರೂಣ ಹತ್ಯೆ ಸಹ ಮಾಡಬಾರದು’ ಎಂದರು.
‘ವರ್ತಮಾನದಲ್ಲಿ ಏಕ ಸಂತಾನದ ಯೋಚನೆಯ ಕಾರಣದಿಂದ ಹಿಂದೂ ಸಮಾಜದ ಸಂತತಿಗಳು ಕಡಿಮೆಯಾಗುತ್ತಿದೆ. ಹೀಗಾಗಿ ಪ್ರತಿ ದಂಪತಿ ಕನಿಷ್ಠ 3 ಸಂತಾನ ಪ್ರಾಪ್ತ ಮಾಡಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮನೆಯಲ್ಲಾಗುವ ಭಜನೆ, ಪೂಜೆಯಲ್ಲಿ ಮಕ್ಕಳು ತೊಡಗುವಂತೆ ಮಾಡಬೇಕು. ಟಿ.ವಿ, ಮೊಬೈಲ್ ಬಳಕೆಯಿಂದ ದೂರವಿದ್ದು, ಕುಟುಂಬ ಸದಸ್ಯರೊಂದಿಗೆ ಬೆರೆಯುವಂತೆ ಮಾಡಬೇಕು’ ಎಂದರು.
ಮಾರಿಕಾಂಬಾ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ನಾಯ್ಕ, ಗ್ರಾಭ್ಯುದಯ ಅಧ್ಯಕ್ಷ ರಾಮಚಂದ್ರ ಹೆಗಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣ ದೇಶಪಾಂಡೆ ಇದ್ದರು. ರಮೇಶ ಹೆಗಡೆ ನಿರೂಪಿಸಿದರು. ಸಂತೋಷ ಭಟ್ ಕೊಡಿಗಾರ ವಂದಿಸಿದರು.
ಮನೆಯಲ್ಲಿನ ಹವ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಒಳ್ಳೆಯ ಸಂಸ್ಕಾರ ನೀಡುವುದು ತಂದೆ– ತಾಯಿಯ ಕರ್ತವ್ಯವಾಗಿದೆಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸ್ವರ್ಣವಲ್ಲೀ ಮಠ
ವಿವಿಧ ಗೋಷ್ಠಿ ಆಯೋಜನೆ
ಶಿಬಿರದ ಅಂಗವಾಗಿ ಯೋಗ ಮತ್ತು ನಿಸರ್ಗ ಚಿಕಿತ್ಸೆ ಕುರಿತು ಡಾ. ಕೀರ್ತಿ ಕೆ ಸತ್ ಸಂತಾನಕ್ಕಾಗಿ ಆಯುರ್ವೇದ ಸೂತ್ರಗಳ ಕುರಿತು ಡಾ.ವಿನಾಯಕ ಹೆಬ್ಬಾರ ಸತ್ ಸಂತಾನಕ್ಕಾಗಿ ಶಾಸ್ತ್ರ ಸೂತ್ರಗಳ ಕುರಿತು ಸೀತಾರಾಮ ಭಟ್ ಮತ್ತಿಗಾರ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಮತ್ತು ಕುಟುಂಬ ಜೀವನದ ಮಹತ್ವದ ಕುರಿತು ಕೃಷ್ಣ ಶ್ರೀನಿವಾಸ ದೇಶಪಾಂಡೆ ಗೋಷ್ಠಿಗಳನ್ನು ನಡೆಸಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.