ADVERTISEMENT

ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿ: ಸಚಿವ ದೇಶಪಾಂಡೆ

ಆರೋಗ್ಯ ಯೋಜನೆಯ ನೋಂದಣಿ ಕಾರ್ಡ್ ವಿತರಣಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:52 IST
Last Updated 26 ಜನವರಿ 2019, 11:52 IST
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿ ಕಾರ್ಡ್ ವಿತರಣಾ ಕೇಂದ್ರ ಉದ್ಘಾಟಿಸಿದ ಸಚಿವ ದೇಶಪಾಂಡೆ ಮಾಹಿತಿ ಪಡೆದರು
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿ ಕಾರ್ಡ್ ವಿತರಣಾ ಕೇಂದ್ರ ಉದ್ಘಾಟಿಸಿದ ಸಚಿವ ದೇಶಪಾಂಡೆ ಮಾಹಿತಿ ಪಡೆದರು   

ಕಾರವಾರ:‘ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಿ. ಈ ನಿಟ್ಟಿನಲ್ಲಿ ನಿಯಮದ ಬದಲಾವಣೆಗೆ ನಾನೂ ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರ ಯೋಜನೆಯನೋಂದಣಿ ಕಾರ್ಡ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಅಥವಾ ತಾಲ್ಲೂಕು ಆಸ್ಪತ್ರೆಯಲ್ಲೇ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ನಿಯಮದಿಂದ ಗ್ರಾಮೀಣ ಜನರಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ 62 ಲಕ್ಷ ಕುಟುಂಬಗಳುಬಡತನ ರೇಖೆಗಿಂತ ಕೆಳಗಿವೆ ಎಂದು ಕೇಂದ್ರ ಸರ್ಕಾರ ಲೆಕ್ಕಾಚಾರ ಹಾಕಿದೆ. ಅದರಂತೆ ಆ ಕುಟುಂಬಗಳಿಗೆ ತನ್ನ‘ಆಯುಷ್ಮಾನ್ ಭಾರತ’ ಯೋಜನೆಯ ಲಾಭ ನೀಡುವುದಾಗಿ ತಿಳಿಸಿದೆ. ಆದರೆ, ರಾಜ್ಯ ಸರ್ಕಾರದ ಪ್ರಕಾರ ಅಂದಾಜು 1.20 ಕೋಟಿ ಕುಟುಂಬಗಳಿವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಹೊರಗುಳಿಯುವ ಬಡವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಇದರಿಂದ ಅರ್ಹರಿಗೆ ಪ್ರಯೋಜನವಾಗಲಿದೆ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಸರ್ಕಾರಗಳ ಪ್ರತಿ ಯೋಜನೆಯೂ ಈ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಯಾದರೆ ಬಡವರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಅದೆಷ್ಟೋ ಯೋಜನೆಗಳು ಜನರಿಗೆ ತಲುಪುವುದೇ ಇಲ್ಲ. ಅದಕ್ಕೆ ಜನಪ್ರತಿನಿಧಿಗಳೇ ಕಾರಣ. ಫಲಾನುಭವಿಗಳ ಆರೋಗ್ಯವೇ ಸರಿಯಿಲ್ಲದಿದ್ದರೆ ಯಾವ ಯೋಜನೆ ಜಾರಿಯಾದರೂ ಪ್ರಯೋಜನವೇನು? ಇದಕ್ಕಾಗಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಜಾರಿಗೆ ತಂದಿದೆ’ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.