ADVERTISEMENT

ಕದಂಬದಲ್ಲಿ ಬಾಳೆಕಾಯಿ ಟೆಂಡರ್: ರೈತರ ಉತ್ಪನ್ನಕ್ಕೆ ಉತ್ತಮ ಬೆಲೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 14:14 IST
Last Updated 4 ಮೇ 2020, 14:14 IST
ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ‘ನೆಲಸಿರಿ’ ಬ್ರ್ಯಾಂಡ್‌ನ ಬಾಳೆಹಣ್ಣಿನ ಚಾಕೊಲೆಟ್‌ ಅನ್ನು ಸಚಿವ ಬಿ.ಸಿ.ಪಾಟೀಲ ಬಿಡುಗಡೆಗೊಳಿಸಿದರು
ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ‘ನೆಲಸಿರಿ’ ಬ್ರ್ಯಾಂಡ್‌ನ ಬಾಳೆಹಣ್ಣಿನ ಚಾಕೊಲೆಟ್‌ ಅನ್ನು ಸಚಿವ ಬಿ.ಸಿ.ಪಾಟೀಲ ಬಿಡುಗಡೆಗೊಳಿಸಿದರು   

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು ರೈತರು ಬೆಳೆದಿರುವ ಬಾಳೆಕಾಯಿಯನ್ನು ಟೆಂಡರ್‌ ಮೂಲಕ ಖರೀದಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೋಮವಾರ ಇದಕ್ಕೆ ಚಾಲನೆ ನೀಡಿದರು.

ಸಚಿವದ್ವಯರು ‘ನೆಲಸಿರಿ’ ಬ್ರ್ಯಾಂಡ್‌ನ ಬಾಳೆಹಣ್ಣಿನ ಚಾಕೊಲೆಟ್ ಬಿಡುಗಡೆಗೊಳಿಸಿದರು. ಮೊದಲ ದಿನವೇ 300ಕ್ಕೂ ಅಧಿಕ ಕ್ವಿಂಟಲ್ ಬಾಳೆಕಾಯಿ ಮಾರಾಟಕ್ಕೆ ಬಂದಿತ್ತು. ವಿವಿಧ ತಾಲ್ಲೂಕುಗಳ ರೈತರು ಬೆಳೆಯನ್ನು ಮಾರಾಟಕ್ಕೆ ತಂದಿದ್ದರು. ಏಲಕ್ಕಿ ಮಿಟ್ಲಿ ಫಸ್ಟ್ ಗ್ರೇಡ್‌ಗೆ ಕೆ.ಜಿ.ಯೊಂದಕ್ಕೆ ₹ 18, ಕರಿಬಾಳೆ ಫಸ್ಟ್‌ ಗ್ರೇಡ್ ಕೆ.ಜಿ.ಯೊಂದಕ್ಕೆ ₹ 10 ದರ ಲಭ್ಯವಾಯಿತು. 20ಕ್ಕೂ ಹೆಚ್ಚು ವ್ಯಾಪಾರಸ್ಥರು ಭಾಗವಹಿಸಿದ್ದರು.

‘ಬಾಳೆಹಣ್ಣಿನ ಕೊಯ್ಲೋತ್ತರ ಸಂಸ್ಕರಣಾ ಘಟಕಕ್ಕೆ ಕದಂಬ ಮಾರ್ಕೆಟಿಂಗ್ ಪ್ರಯತ್ನಿಸುತ್ತಿದೆ. ಕದಂಬ ಬ್ರ್ಯಾಂಡ್‌ನಲ್ಲಿ ಸಾವಯವ ಬಾಳೆಹಣ್ಣು ಮಾರಾಟ ಮಾಡಲಾಗುತ್ತದೆ. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕದಂಬವು ಒಂದು ಗೊನೆಯಿಂದ, ಎಷ್ಟು ಕ್ವಿಂಟಲ್‌ತನಕ ಉತ್ಪನ್ನಗಳನ್ನು ತಂದರೂ ಖರೀದಿಸುತ್ತದೆ’ ಎಂದು ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ತಿಳಿಸಿದರು.

ADVERTISEMENT

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಟೆಂಡರ್ ನಡೆಯುತ್ತದೆ. ಪ್ರತಿ ಗುರುವಾರ ಯಲ್ಲಾಪುರ ಶಾಖೆಯಲ್ಲಿ ನೇರ ಖರೀದಿ ನಡೆಯುತ್ತದೆ ಎಂದರು.

ಶಾಸಕರಾದ ಸುನೀಲ ನಾಯ್ಕ, ರೂಪಾಲಿ ನಾಯ್ಕ, ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರೋಶನ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.