ADVERTISEMENT

ಕಾರವಾರ: ಲಾಕ್‌ಡೌನ್ ನೆಪದಲ್ಲಿ ಹಣ ವಂಚನೆ

ಎಟಿಎಂ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ಒಟಿಪಿ ಕೇಳಿ ₹ 8,000 ವಂಚನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 14:27 IST
Last Updated 12 ಏಪ್ರಿಲ್ 2020, 14:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಲಾಕ್‌ಡೌನ್ ಅವಧಿಯಲ್ಲಿಎಟಿಎಂ ಕಾರ್ಡ್ ಬ್ಲಾಕ್ ಆಗುತ್ತದೆ ಎಂದು ನಂಬಿಸಿದ ವಂಚಕನೊಬ್ಬ ನಗರದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹ 8,000 ಲಪಟಾಯಿಸಿದ್ದಾನೆ.

ನಂದನಗದ್ದಾ ನಿವಾಸಿ ರಾಜೇಶ ನಾಯಕ ಅವರ ಮೊಬೈಲ್‌ಗೆ ಶನಿವಾರ ಕರೆ ಮಾಡಿದ ಆರೋಪಿಯು, ತನ್ನನ್ನು ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡಿದ್ದ. ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಎಟಿಎಂ ಕಾರ್ಡ್‌ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಚಾಲ್ತಿಯಲ್ಲಿ ಇರುವಂತೆ ಮಾಡಲು ತಮ್ಮ ಮೊಬೈಲ್‌ಗೆ ಬರುವ ಒ.ಟಿ.ಪಿ ಸಂಖ್ಯೆಯನ್ನು ತಿಳಿಸಬೇಕು ಎಂದು ಹೇಳಿದ್ದ.

ಅದನ್ನು ನಂಬಿದ ರಾಜೇಶ ನಾಯಕ,ಒ.ಟಿ.ಪಿ ಸಂಖ್ಯೆಯನ್ನು ಆತನಿಗೆ ಹೇಳಿದ್ದರು. ಬಳಿಕ ಅವರ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ. ಈ ಬಗ್ಗೆಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

ಮದ್ಯ ಸಾಗಣೆ: ಒಬ್ಬನ ಬಂಧನ

ಕಾರವಾರತಾಲ್ಲೂಕಿನ ಮಾಜಾಳಿಯ ಸಿಮೆಂಟ್ ಫ್ಯಾಕ್ಟರಿ ಕ್ರಾಸ್ ಬಳಿ ಗೋವಾ ಮದ್ಯದ ಬಾಟಲಿಗಳನ್ನುಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು ನಿವಾಸಿ ಕೃಷ್ಣ ಎಲ್ಲಮ್ಮಾ ಹೊಸಕೋಟೆ (19) ಬಂಧಿತ ಆರೋಪಿಯಾಗಿದ್ದಾನೆ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ, ಶಿರವಾಡದ ದರ್ಶನ ಎಂಬಾತನ ಜೊತೆಬೈಕ್‌ನಲ್ಲಿ ಮದ್ಯ ಸಾಗಿಸುತ್ತಿದ್ದ. ಈ ಸಂದರ್ಭದಲ್ಲಿ ದಾಳಿ ಮಾಡಿದ ಪೊಲೀಸರು₹10,800 ಮೌಲ್ಯದ ಮದ್ಯ ಹಾಗೂದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.