ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಕುಸಿದು ಬಿದ್ದಿರುವ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷಗಳನ್ನು ನದಿಯಿಂದ ಮೇಲಕ್ಕೆತ್ತಲು ಮುಂಬೈನಿಂದ ಭಾರಿ ಗಾತ್ರದ ಬಾರ್ಜ್ ಬಂದಿದೆ.
ಸದ್ಯ ವಾಣಿಜ್ಯ ಬಂದರಿನಲ್ಲಿ ಇರುವ ಈ ಬಾರ್ಜ್ 50 ಅಡಿ ಉದ್ದವಿದೆ. ಕಾಂಕ್ರೀಟ್ ಒಡೆಯುವ ಯಂತ್ರ, ಕ್ರೇನ್ ಸೇರಿ ಸೇತುವೆ ತೆರವು ಕಾರ್ಯಾಚರಣೆಗೆ ಬಳಕೆಯಾಗಬಲ್ಲ ಯಂತ್ರೋಪಕರಣಗಳನ್ನು ಹೊಂದಿದೆ. ಇದು ನದಿಯಲ್ಲಿ ಸಾಗಲು ಪರವಾನಗಿ ಅಗತ್ಯವಿದೆ. ಎಲ್ಲಾ ಯಂತ್ರೋಪಕರಣ ಜೋಡಿಸಿಕೊಂಡ ಬಳಿಕ ಕಾರ್ಯಾಚರಣೆ ನಡೆಸುವುದಾಗಿ ಐಆರ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. ಸಂಗಮ ಪ್ರದೇಶದಲ್ಲಿ ಹೂಳು ಇರುವ ಕಾರಣ ಸಮುದ್ರದ ಉಬ್ಬರದ ವೇಳೆಯಲ್ಲಿ ಮಾತ್ರ ನದಿ ಸೇರಲು ಸಾಧ್ಯವಾಗಲಿದೆ’ ಎಂದು ಬಂದರು ಮತ್ತು ಜಲಸಾರಿಗೆ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
‘ಸೇತುವೆ ಅವಶೇಷಗಳ ತೆರವಿಗೆ ಬಾರ್ಜ್ ಜೊತೆಗೆ ಇನ್ನೂ ಸಣ್ಣ ಗಾತ್ರದ ಬಾರ್ಜ್, ಹಲವು ಯಂತ್ರೋಪಕರಣ, ಟಗ್ ಬೋಟ್ ತರಿಸಲಾಗುತ್ತಿದೆ. ಅವು ಮುಂಬೈನಿಂದ ಒಂದೆರಡು ದಿನಗಳಲ್ಲಿ ಕಾರವಾರ ತಲುಪಬಹುದು. ದಸರಾ ಮುಗಿದ ಬಳಿಕ ತೆರವು ಕಾರ್ಯ ನಡೆಯಲಿದೆ’ ಎಂದು ಐಆರ್‌ಬಿ ಕಂಪನಿಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ನದಿಯಲ್ಲಿ ಟನ್‌ಗಟ್ಟಲೇ ಕಾಂಕ್ರೀಟ್ ತ್ಯಾಜ್ಯ ಬಿದ್ದಿದೆ. ಜೊತೆಗೆ 330 ಮೀಟರ್‌ನಷ್ಟು ಸೇತುವೆ ಭಾಗ ತೆರವು ಆಗಬೇಕಿದೆ. ಅದಕ್ಕೆ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಬೇಕಾಗಬಹುದು’ ಎಂದು ಮೂಲಗಳು ತಿಳಿಸಿವೆ.
ಡಿಎನ್‍ಎ ವರದಿ 10 ದಿನ ವಿಳಂಬ
ಶಿರೂರಿನ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ವೇಳೆ ಸಿಕ್ಕ ಎರಡು ಮೂಳೆಗಳ ಡಿಎನ್‍ಎ ಪರೀಕ್ಷೆ ವರದಿ ನಿಖರವಾಗಿ ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಮೂಳೆಗಳನ್ನು ಹುಬ್ಬಳ್ಳಿಯ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸುವ ಮುನ್ನ ಅಂಕೋಲಾ ಸರ್ಕಾರಿ ಆಸ್ಪತ್ರೆ ವೈದ್ಯರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಫಾರ್ಮಾಲಿನ್ ಬಳಸಿದ್ದರಿಂದ ಮೂಳೆಯಿಂದ ಡಿಎನ್‍ಎ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
‘ಡಿಎನ್‌ಎ ಪರೀಕ್ಷೆ ಆಧರಿಸಿದ ನಿಖರ ವರದಿ ಬರಲು ಇನ್ನೂ 10 ರಿಂದ 12 ದಿನ ಬೇಕಾಗಬಹುದು ಎಂಬ ಮಾಹಿತಿ ವೈದ್ಯರು ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.