ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರವನ್ನು ಸ್ವಚ್ಛಗೊಳಿಸಲು ಐದು ವರ್ಷಗಳ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಖರೀದಿಸಿದ್ದ ಕಡಲತೀರ ಸ್ವಚ್ಛಗೊಳಿಸುವ ಯಂತ್ರ ನಿರ್ವಹಣೆ ಇಲ್ಲದೆ ಕಡಲತೀರದಲ್ಲಿರುವ ಶೆಡ್ ಸೇರಿಕೊಂಡಿದೆ. ನಿರ್ವಹಣೆ ಇಲ್ಲದ ಪರಿಣಾಮ ಯಂತ್ರ ತುಕ್ಕು ಹಿಡಿದು ಹಾಳಾಗುತ್ತಿದೆ.
2018ರಲ್ಲಿ ಸ್ವದೇಶ ದರ್ಶನ್ ಯೋಜನೆ ಅಡಿ ಸುಮಾರು ₹60 ಲಕ್ಷ ವೆಚ್ಚದಲ್ಲಿ ಯಂತ್ರವನ್ನು ಖರೀದಿಸಲಾಗಿತ್ತು. ಟ್ರ್ಯಾಕ್ಟರ್ ಸಹಿತ ಯಂತ್ರವನ್ನು ಡೆನ್ಮಾರ್ಕ್ ಮೂಲದ ಕಂಪನಿಯಿಂದ ಖರೀದಿಸಿದ್ದಾಗಿ ಜಿಲ್ಲಾಡಳಿತ ಅಂದು ಹೇಳಿಕೊಂಡಿತ್ತು. ಒಂದೆರಡು ವರ್ಷಗಳ ಕಾಲ ಟ್ಯಾಗೋರ್ ಕಡಲತೀರದಲ್ಲಿ ಯಂತ್ರ ಬಳಕೆ ಮಾಡಿ ನಿತ್ಯ ಸ್ವಚ್ಛತೆ ಕೆಲಸ ನಡೆಸಲಾಗುತ್ತಿತ್ತು.
ಆದರೆ, ಕಳೆದ ಕೆಲವು ತಿಂಗಳುಗಳಿಂದ ಯಂತ್ರ ಬಳಕೆಯಾಗುತ್ತಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಬಳಕೆ ಸ್ಥಗಿತಗೊಳಿಸಿದ್ದಾಗಿ ಯಂತ್ರದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ನಗರಸಭೆ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಹೇಳಿದ್ದರು. ಹಲವು ದಿನ ಕಳೆದ ನಂತರವೂ ಯಂತ್ರವನ್ನು ದುರಸ್ತಿಪಡಿಸಿ ಕಾರ್ಯಾಚರಣೆಗೆ ಬಳಕೆ ಮಾಡಲು ಮುಂದಾಗದಿರುವುದು ಅನುಮಾನ ಮೂಡಿಸಿದೆ.
‘ಟ್ಯಾಗೋರ್ ಕಡಲತೀರವನ್ನು ಶುಚಿಯಾಗಿಡಲು ಕೆಲಸ ಮಾಡುತ್ತಿದ್ದ ಯಂತ್ರ ಹಲವು ದಿನಗಳಿಂದ ಕಾಣಿಸುತ್ತಿಲ್ಲ. ನಿತ್ಯ ಬೆಳಿಗ್ಗೆ ಕಡಲತೀರದಲ್ಲಿ ಯಂತ್ರದ ಮೂಲಕ ಸ್ವಚ್ಛತೆ ಕಾರ್ಯ ನಡೆಯುತ್ತಿದ್ದನ್ನು ಗಮನಿಸುತ್ತಿದ್ದೆ. ಕಸಕಡ್ಡಿಗಳನ್ನು ತೆರವುಗೊಳಿಸಲು ಅನುಕೂಲವಾಗುತ್ತಿತ್ತು. ಆದರೆ ಈಗ ಕಡಲತೀರದುದ್ದಕ್ಕೂ ಕಸದ ರಾಶಿ ಬಿದ್ದಿದೆ. ಅದನ್ನು ತೆಗೆಯುವವರೇ ಇಲ್ಲ’ ಎಂದು ನಗರದ ಕೆ.ಎಚ್.ಬಿ ಕಾಲೊನಿ ನಿವಾಸಿ ಮಚ್ಚೇಂದ್ರ ಮಹಾಲೆ ದೂರಿದರು.
‘ಕಡಲತೀರ ಸ್ವಚ್ಛಗೊಳಿಸುವ ಯಂತ್ರವನ್ನು ಈ ಮೊದಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಿರ್ವಹಣೆ ಮಾಡುತ್ತಿತ್ತು. ಕಡಲತೀರಗಳ ನಿರ್ವಹಣೆ ಜವಾಬ್ದಾರಿ ಸಮಿತಿಯಿಂದ ನಗರಸಭೆಗೆ ಹಸ್ತಾಂತರಗೊಂಡ ಬಳಿಕ ನಗರಸಭೆ ನಿರ್ವಹಣೆ ನಡೆಸುತ್ತಿತ್ತು. ಕೆಲವು ತಿಂಗಳುಗಳಿಂದ ಯಂತ್ರದ ಬಳಕೆ ನಿಲ್ಲಿಸಲಾಗಿದೆ. ಯಂತ್ರೋಪಕರಣದ ಸಮಸ್ಯೆ ಕಾರಣಕ್ಕೆ ಕೆಲಸ ನಡೆಸಲು ಆಗುತ್ತಿಲ್ಲ ಎಂದು ನಗರಸಭೆ ತಿಳಿಸಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
₹60 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಜಿಲ್ಲಾಡಳಿತ ವಿದೇಶಿ ಕಂಪನಿ ತಯಾರಿಸಿದ್ದ ಕಡಲತೀರ ಸ್ವಚ್ಛಗೊಳಿಸುವ ಯಂತ್ರ ತುಕ್ಕು ಹಿಡಯುತ್ತಿರುವ ಯಂತ್ರದ ಬಿಡಿಭಾಗಗಳು
ಕಡಲತೀರ ಸ್ವಚ್ಛಗೊಳಿಸುವ ಯಂತ್ರದ ದುರಸ್ತಿಗೆ ₹1.5 ಲಕ್ಷದ ಅಗತ್ಯವಿದೆ. ಪುಣೆಯಿಂದ ತಂತ್ರಜ್ಞರನ್ನು ಕರೆಯಿಸಲಾಗುತ್ತಿದ್ದು ಅವರು ದುರಸ್ಥಿ ಕೆಲಸ ನಡೆಸಿದ ಬಳಿಕ ಕಾರ್ಯಾರಂಭಿಸಲಾಗುತ್ತದೆಗಂಗೂಬಾಯಿ ಮಾನಕರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.