ADVERTISEMENT

ಪಕ್ಷಾತೀತವಾಗಿ ಸಮಾವೇಶದಲ್ಲಿ ಪಾಲ್ಗೊಳ್ಳಿ: ಶಾಸಕ ಭೀಮಣ್ಣ

ನದಿ ತಿರುವು ಯೋಜನೆ ವಿರೋಧಿಸಿ ಜ.11ರಂದು ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:07 IST
Last Updated 28 ಡಿಸೆಂಬರ್ 2025, 5:07 IST
ಬೇಡ್ತಿ, ಅಘನಾಶಿನಿ ನದಿ ಉಳಿವು ಸಮಾವೇಶದ ಫಲಕ, ಬ್ಯಾನರ್ ಗಳನ್ನು ಶನಿವಾರ ನಗರದ ಟಿ.ಆರ್.ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು
ಬೇಡ್ತಿ, ಅಘನಾಶಿನಿ ನದಿ ಉಳಿವು ಸಮಾವೇಶದ ಫಲಕ, ಬ್ಯಾನರ್ ಗಳನ್ನು ಶನಿವಾರ ನಗರದ ಟಿ.ಆರ್.ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು   

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳ ಜನರು ಪಕ್ಷ, ಜಾತಿ ಭೇದ ಮರೆತು ಒಂದಾಗಿ ಬೇಡ್ತಿ-ಅಘನಾಶಿನಿ ಕಣಿವೆ ರಕ್ಷಣಾ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. 

ಬೇಡ್ತಿ, ಅಘನಾಶಿನಿ ನದಿ ಉಳಿವು ಸಮಾವೇಶದ ಫಲಕ, ಬ್ಯಾನರ್ ಗಳನ್ನು ಶನಿವಾರ ನಗರದ ಟಿ.ಆರ್.ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನದಿ ಜೋಡಣೆಯಿಂದ ಜಿಲ್ಲೆಯ ಹಲವು ಗ್ರಾಮಗಳಿಗೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಸಾರ್ವಜನಿಕರು ಹೋರಾಟ, ಸಮಾವೇಶಗಳಲ್ಲಿ ಪಾಲ್ಗೊಳ್ಳಬೇಕು’ ಎಂದರು. 

ಈ ಮೊದಲು ಬೇಡ್ತಿ-ಅಘನಾಶಿನಿ ನದಿ ಉಳಿಸುವ ನಿಟ್ಟಿನಲ್ಲಿ ನಗರದ ಯೋಗ ಮಂದಿರದಲ್ಲಿ ನಡೆದ ಮಹಿಳಾ ಸಂಘ ಸಂಸ್ಥೆಗಳ ಪ್ರಮುಖರ ಸಭೆಯ ಸಂದೇಶವನ್ನು ಶಿರಸಿ ನಗರದ ವಿವಿಧ ವಾರ್ಡಗಳಲ್ಲಿ ಪ್ರಚುರ ಪಡಿಸಲು ನಿಶ್ಚಯ ಮಾಡಲಾಯಿತು. ಪರಿಸರ ಘೋಷಣೆಗಳು, ಹಾಡುಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯೋಗ ನಡೆಸಲು ಮಹಿಳಾ ಮುಖಂಡರು ನಿರ್ಧರಿಸಿದ್ದು, ವಿವಿಧ ಮಾತೃ ಮಂಡಳಿಗಳು, ಭಜನಾ ಮಂಡಳಿ ದೈವಜ್ಞ, ಜಿ.ಎಸ್.ಬಿ ಸಮಾಜಗಳ ಮಾತೃ ಮಂಡಳಿಗಳು ತಮ್ಮ ತಮ್ಮ ಗುಂಪುಗಳಲ್ಲಿ ನಗರಗಳಲ್ಲಿ ಜ.11ರ ಸಮಾವೇಶಕ್ಕೆ ಬರಲು ಆಹ್ವಾನ ನೀಡುವುದಾಗಿ ತಿಳಿಸಲಾಯಿತು.

ADVERTISEMENT

ಬೇಡ್ತಿ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಟಿ.ಆರ್.ಸಿ. ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಪ್ರಮುಖರಾದ ದೀಪಕ ದೊಡ್ಡೂರು, ಎಸ್.ಕೆ ಭಾಗ್ವತ, ಕೆ.ಎನ್.ಹೊಸಮನಿ ಇತರರಿದ್ದರು. ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿ.ಎನ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ ಕೇಶವ ಕೂರ್ಸೆ ಅವರು ನದಿ ಕಣಿವೆಗಳ ಮಹತ್ವದ ಕುರಿತು ವಿವರಿಸಿದರು. ಸುನಂದಾ ಭಟ್ ಸ್ವಾಗತಿಸಿದರು. ವೇದಾ ಹೆಗಡೆ ನೀರ್ನಳ್ಳಿ ವಂದಿಸಿದರು. ಭಾರತಿ ಬೊಮ್ಮನಳ್ಳಿ, ಮಧುಮತಿ ಬಕ್ಕೆಮನೆ ನಿರ್ವಹಿಸಿದರು. ಮಹಿಳಾ ಸಾಂತ್ವನ ವೇದಿಕೆ, ಆದರ್ಶ ವನಿತಾ ಸಮಾಜ, ಇನ್ನರ್ ವೀಲ್ ಕ್ಲಬ್ ಮುಂತಾದ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. 

ಜನಾಂದೋಲನದಿಂದ ಮಾತ್ರ ಬೃಹತ್ ಯೋಜನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಿರಸಿಯಲ್ಲಿ ಜ.11ರಂದು ನಡೆಯುವ ಸಮಾವೇಶ ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ.
–ಭೀಮಣ್ಣ ನಾಯ್ಕ ಶಾಸಕ