ಶಿರಸಿ: ಅಡಿಕೆ ಕೊಳೆ ರೋದಿಂದ ಉಂಟಾದ ನಷ್ಟದ ಸಂಬಂಧ ತೋಟಗಾರಿಕಾ ಇಲಾಖೆ ವತಿಯಿಂದ ನಡೆಯುತ್ತಿರುವ ಗ್ರಾಮವಾರು ಸರ್ವೆಗೆ ಬೆಳೆಗಾರರ ಆಕ್ಷೇಪ ವ್ಯಕ್ತವಾಗಿದೆ. ಈ ಸರ್ವೆಯಡಿ ಹಾನಿಯ ನೈಜ ಲೆಕ್ಕಾಚಾರ ಸಿಗದ ಕಾರಣ ಕೊಳೆ ರೋಗ ಬಂದ ತೋಟಗಳ ರೈತರ ಅಡಿಕೆ ಕ್ಷೇತ್ರದ ಪ್ರತ್ಯೇಕ ಸರ್ವೆ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಅತಿವೃಷ್ಟಿಗೆ ಐದು ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆಗೆ ಕೊಳೆರೋಗ ವ್ಯಾಪಿಸಿದೆ. ಇದರಲ್ಲಿ ಬಹುತೇಕ ಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಹಾನಿಯಾಗಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಕೆಲವು ಕಡೆ ಮಾತ್ರ ಕಡಿಮೆ ಹಾನಿ ಉಂಟಾಗಿದೆ ಎಂಬುದು ತೋಟಗಾರಿಕಾ ಇಲಾಖೆ ಲೆಕ್ಕಾಚಾರವಾಗಿದೆ.
ಅಡಿಕೆಗೆ ಹೆಚ್ಚಿನ ಕೊಳೆ ಬಂದ ಗ್ರಾಮಗಳಲ್ಲಿ ತೋಟಗಾರಿಕಾ ಇಲಾಖೆ ಸಿಬ್ಬಂದಿ ವಾರದಿಂದ ಹಾನಿಯ ಸರ್ವೆ ಮಾಡುತ್ತಿದ್ದಾರೆ. ಆದರೆ ಇಲಾಖೆಯು ಹೀಗೆ ಮಾಡುತ್ತಿರುವ ಸಾಮೂಹಿಕ ಸರ್ವೆಗೆ ಬೆಳೆಗಾರರ ಆಕ್ಷೇಪ ವ್ಯಕ್ತವಾಗಿದೆ.
ಹಾನಿಗೆ ಪರಿಹಾರ ಕೊಡುವುದಿದ್ದರೆ ಮಾತ್ರ ಕಂದಾಯ ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಹಾನಿಗೊಳಗಾದ ಪ್ರತಿ ಕ್ಷೇತ್ರದ ಜಂಟಿ ಸರ್ವೆ ನಡೆಸಲಾಗುತ್ತದೆ. ಸದ್ಯ ಅಡಿಕೆ ಕೊಳೆಯಿಂದಾದ ಹಾನಿಗೆ ಸರ್ಕಾರದಿಂದ ಪರಿಹಾರ ಘೋಷಣೆಯಾಗಿಲ್ಲ. ಹೀಗಾಗಿ ಗ್ರಾಮದ ಐದು ತೋಟ ಸರ್ವೆ ನಂಬರ್‌ಗಳಲ್ಲಿ ಸಮೀಕ್ಷೆ ನಡೆಸಿ ಇಡೀ ಗ್ರಾಮದ ಉಳಿದ ತೋಟಗಳ ಸರ್ವೆ ನಂಬರ್‌ನಲ್ಲಿನ ಹಾನಿಯ ಸ್ಥಿತಿಗತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಹಾನಿಯ ವರದಿ ಸಿದ್ಧಪಡಿಸುವ ಕಾರ್ಯ ತೋಟಗಾರಿಕಾ ಇಲಾಖೆಯಿಂದ ನಡೆಯುತ್ತಿದೆ. ಹೀಗಾದರೆ ಹೆಚ್ಚಿನ ಹಾನಿಗೊಳಗಾದ ರೈತರ ಲೆಕ್ಕವು ವರದಿಯಲ್ಲಿ ತಪ್ಪಾಗಿ ನಮೂದಾಗುತ್ತದೆ. ಹಾನಿಯನ್ನು ಸಾಮೂಹಿಕಗೊಳಿಸಿ, ವರದಿ ನೀಡುವುದು ಅವೈಜ್ಞಾನಿಕ ಎಂಬುದು ಅಡಿಕೆ ಬೆಳೆಗಾರರ ದೂರು.
‘ಗ್ರಾಮದ ಒಂದು ಕಡೆಯ ತೋಟದಲ್ಲಿ ಶೇ 80ರಷ್ಟು ಹಾನಿಯಾಗಿದೆ. ಅದೇ ಗ್ರಾಮದ ಮತ್ತೊಂದು ಭಾಗದಲ್ಲಿ ಶೇ 10ರಷ್ಟು ಕೊಳೆ ರೋಗ ಬಾಧಿಸಿದೆ. ಕಡಿಮೆ ಹಾನಿಯಾದ ತೋಟದಲ್ಲಿ ಸರ್ವೆ ನಡೆಸಿ, ಗ್ರಾಮವಾರು ಪರಿಶೀಲನೆಯ ಮಾನದಂಡ ಅನುಸರಿಸಿ ವರದಿ ನೀಡಿದರೆ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದಂತಾಗುತ್ತದೆ. ಒಂದೊಮ್ಮೆ ಕೊಳೆಗೆ ಪರಿಹಾರ ಘೋಷಿಸಿದರೆ ನೈಜ ಹಾನಿಗೊಂಡ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂಬುದು ಬೆಳೆಗಾರ ಮಂಜುನಾಥ ಹೆಗಡೆ ಅಭಿಪ್ರಾಯ.
‘ಕೊಳೆ ಹಾನಿಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಪ್ಯಾಕೇಜ್ ಘೋಷಿಸಬೇಕು. ಅದಕ್ಕೆ ಪೂರಕವಾಗಿ ಗ್ರಾಮವಾರು ಸರ್ವೆ ಮಾಡುವ ಬದಲು ಕೊಳೆ ರೋಗ ಬಂದ ತೋಟಗಳ ರೈತರ ಅಡಿಕೆ ಕ್ಷೇತ್ರದ ಪ್ರತ್ಯೇಕ ಸರ್ವೆ ಮಾಡಲು ಸರ್ಕಾರ ಆದೇಶಿಸಬೇಕು. ಹೀಗೆ ಮಾಡುವುದರಿಂದ ಹಾನಿಗೊಳಗಾದ ನೈಜ ಬೆಳೆಗಾರರಿಗೆ ತಕ್ಕಮಟ್ಟಿನ ಅನುಕೂಲ ಆಗುತ್ತದೆ’ ಎಂದು ಬಹುತೇಕ ಅಡಿಕೆ ಬೆಳೆಗಾರರು ಹೇಳಿದರು.
ಈಗಾಗಲೇ ಅಡಿಕೆ ಕೊಳೆ ರೋಗ ಬಂದ ಕ್ಷೇತ್ರಗಳಲ್ಲಿ ಗ್ರಾಮವಾರು ಸರ್ವೆ ಆರಂಭವಾಗಿದೆ. ಶೀಘ್ರದಲ್ಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದುಗಣೇಶ ಹೆಗಡೆ ತೋಟಗಾರಿಕಾ ಇಲಾಖೆ ಅಧಿಕಾರಿ
ಪರಿಹಾರವೇ ಇಲ್ಲ: ಸರ್ವೆ ಯಾಕಾಗಿ?
2012–13ನೇ ಸಾಲಿನಲ್ಲಿ ಅಡಿಕೆ ಕೊಳೆಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗಿತ್ತು. ಅದಾದ ನಂತರ ಅಡಿಕೆಗೆ ಎಷ್ಟೇ ಕೊಳೆ ರೋಗ ಬಂದರೂ ಪರಿಹಾರ ನೀಡಿಲ್ಲ. ಆದರೆ ಪ್ರತಿ ವರ್ಷ ಸರ್ವೆ ಕಾರ್ಯವನ್ನು ತೋಟಗಾರಿಕಾ ಇಲಾಖೆ ಮೂಲಕ ಮಾಡಲಾಗುತ್ತದೆ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಸರ್ವೆ ಕಾರ್ಯ ಯಾಕಾಗಿ ಮಾಡಬೇಕು ಎಂಬುದು ಅಡಿಕೆ ಬೆಳೆಗಾರರ ಪ್ರಶ್ನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.